ಹುಬ್ಬಳ್ಳಿ: ಕೂಲಿ ಕೆಲಸ ಮಾಡುತ್ತಿದ್ದವರ ಮೇಲೆ ತ್ಯಾಜ್ಯದ ರಾಶಿ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಮಂಟೂರು ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.ಮೃತ ಮಹಿಳೆಯರನ್ನು ಸ್ಥಳೀಯ ಗಾಂಧಿವಾಡದ ಏಕತಾ ಕಾಲೊನಿ ನಿವಾಸಿ ಪದ್ಮಾವತಿ ತಲಪಾಟಿ (54) ಹಾಗೂ ಮೌಲಾಲಿ ಜೋಪಡಿಯ ಚನ್ನಮ್ಮ ಅಸ್ತೋಟಿ (42) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 9.30ರ ಸುಮಾರಿಗೆ ಒಟ್ಟು ಆರು ಮಹಿಳೆಯರು ಕಲ್ಲಿದ್ದಲು ಮಿಶ್ರಿತ ತ್ಯಾಜ್ಯವನ್ನು ಸುರಿದಿದ್ದ ಜಾಗದಲ್ಲಿ ಕಲ್ಲಿದ್ದಲು ಆಯ್ದುಕೊಳ್ಳುವ ಕಾಯಕದಲ್ಲಿ ತೊಡಗಿದ್ದರು.
ಹಳೆಯ ತ್ಯಾಜ್ಯವಾದ ಇದು ಮಳೆಯ ನೀರಿನಿಂದಾಗಿ ಗಟ್ಟಿಯಾಗಿತ್ತು. ಕಲ್ಲುಗಳನ್ನು ಆಯುವ ಸಲುವಾಗಿ ಈ ಮಹಿಳೆಯರು ಕೆಳಗಿನಿಂದ ತ್ಯಾಜ್ಯದ ರಾಶಿಯನ್ನು ಕೆರೆಯುವಾಗ ಗುಡ್ಡದ ಸ್ವರೂಪಿಯ ಮಣ್ಣು ಅವರ ಮೇಲೇ ಕುಸಿಯಿತು. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರು.
ಉಳಿದವರಿಗೆ ಯಾವುದೇ ಗಾಯವಾಗಿಲ್ಲ. ಜೆಸಿಬಿ ಯಂತ್ರದ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ ಆಸ್ಪತ್ರೆಗೆ ಸಾಗಿಸಲಾಯಿತು. ಘಟನಾ ಸ್ಥಳಕ್ಕೆ ಡಿಸಿಪಿ ಪ್ರತಾಪನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.