ADVERTISEMENT

ನೀರಿನ ಕೊರತೆ ನೀಗಿಸಲು ಜಿಲ್ಲಾಡಳಿತ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST
ನೀರಿನ ಕೊರತೆ ನೀಗಿಸಲು ಜಿಲ್ಲಾಡಳಿತ ಸಜ್ಜು
ನೀರಿನ ಕೊರತೆ ನೀಗಿಸಲು ಜಿಲ್ಲಾಡಳಿತ ಸಜ್ಜು   

ಗುಲ್ಬರ್ಗ: ಬೇಸಿಗೆ ಸಮಯದಲ್ಲಿ ಜಿಲ್ಲೆಯ 235 ಹಳ್ಳಿಗಳಲ್ಲಿ ನೀರಿನ ತೀವ್ರ ಕೊರತೆ ಉಂಟಾಗುವ ಸಾಧ್ಯತೆಯನ್ನು ಮನಗಂಡಿರುವ ಜಿಲ್ಲಾಡಳಿತ ಇದನ್ನು ನಿರ್ವಹಿಸಲು ಭರದ ಸಿದ್ಧತೆ ನಡೆಸಿದೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು (46 ಹಳ್ಳಿ) ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸೇಡಂನಲ್ಲಿ 40, ಅಫಜಲಪುರ ಹಾಗೂ ಆಳಂದದಲ್ಲಿ ತಲಾ 36, ಚಿಂಚೋಳಿಯಲ್ಲಿ 30, ಜೇವರ್ಗಿಯಲ್ಲಿ 24 ಮತ್ತು ಗುಲ್ಬರ್ಗ ತಾಲ್ಲೂಕಿನಲ್ಲಿ 23 ಗ್ರಾಮಗಳು ನೀರಿನ ಸಮಸ್ಯೆ ಎದುರಿಸಲಿವೆ ಎಂದು ಅಂದಾಜಿಸಲಾಗಿದೆ.

ಈವರೆಗೆ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳು ಸತತ ಎರಡು ವರ್ಷ ಬರಗಾಲದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು, ಬತ್ತಿ ಹೋಗಿರುವುದೇ ಸಮಸ್ಯೆಗೆ ಕಾರಣವಾಗಿದೆ.

ನೀರಿನ ಸಮಸ್ಯೆ ನೀಗಿಸಲು 4.12 ಕೋಟಿ ರೂಪಾಯಿ ಮೊತ್ತದ ನೀರು ಪೂರೈಕೆ ಕ್ರಿಯಾ ಯೋಜನೆಯನ್ನು ನವೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, 1.36 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಪ್ರತಿ ಕೊಳವೆಬಾವಿಗೆ ರೂ. 50,000 ವೆಚ್ಚದಲ್ಲಿ ಏಳು ತಾಲ್ಲೂಕುಗಳಲ್ಲಿ 266 ಕೊಳವೆಬಾವಿ ಕೊರೆದು, ನೀರು ಪೂರೈಸಲಾಗುವುದು.

ಜಿಲ್ಲಾಧಿಕಾರಿ ಷರತ್ತು: ಕೊಳವೆಬಾವಿಗೆ ಪಂಪ್‌ಸೆಟ್ ಜೋಡಣೆ ಹಾಗೂ ಪೈಪ್‌ಲೈನ್ ಅಳವಡಿಕೆಗೆ ಅಗತ್ಯವಾದ ಹಣವನ್ನು `ಪ್ರಾಕೃತಿಕ ವಿಕೋಪ ನಿಧಿ~ಯಡಿ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಸಮ್ಮತಿಸಿದ್ದಾರೆ.

ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿನ ಕಾರ್ಯಪಡೆ ಅಂಗೀಕಾರ ನೀಡಬೇಕು; ಈ ಕಾಮಗಾರಿಯನ್ನು ಸ್ವತಂತ್ರ ತಂಡದಿಂದ ಪರಿಶೀಲನೆಗೆ ಒಳಪಡಿಸಿದ ಬಳಿಕ ಹಣ ಬಿಡುಗಡೆ ಮಾಡುವುದಾಗಿ ಷರತ್ತು ವಿಧಿಸಿದ್ದಾರೆ.

`ಕಾರ್ಯಪಡೆ ಶಿಫಾರಸು ಮಾಡಿದೆಡೆ ಡಿಸೆಂಬರ್ ನಿಂದಲೇ ಕೊಳವೆಬಾವಿ ಕೊರೆಯಲಾಗುತ್ತಿದೆ. ಈವರೆಗೆ ರೂ. 57.25 ಲಕ್ಷ ವೆಚ್ಚದಲ್ಲಿ 181 ಬೋರ್‌ವೆಲ್ ಕೊರೆಯಲಾಗಿದ್ದು, ಪಂಪ್‌ಸೆಟ್ ಹಾಗೂ ಪೈಪ್‌ಲೈನ್ ಅಳವಡಿಕೆ ಶೀಘ್ರ ಶುರುವಾಗಲಿದೆ~ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಕಾಮಗಾರಿಗಳನ್ನು (66 ಕೊಳವೆ ಬಾವಿ) ಪೂರ್ಣಗೊಳಿಸಲಾಗಿದೆ. ಅಫಜಲಪುರದಲ್ಲಿ 32, ಆಳಂದದಲ್ಲಿ ಐದು, ಚಿಂಚೋಳಿಯಲ್ಲಿ 28, ಗುಲ್ಬರ್ಗದಲ್ಲಿ 14, ಜೇವರ್ಗಿಯಲ್ಲಿ 15 ಹಾಗೂ ಸೇಡಂ ತಾಲ್ಲೂಕಿನಲ್ಲಿ 21 ಕೊಳವೆಬಾವಿ ಕೆಲಸ ಪೂರ್ಣಗೊಂಡಿದೆ.
 
“ಕಳೆದ ವರ್ಷ ಚಿಂಚೋಳಿ ತಾಲ್ಲೂಕಿನ ಶೇರಿ ತಾಂಡಾದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡು, ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗಿತ್ತು. ಈ ಬಾರಿ ಅಂಥ ಸ್ಥಿತಿ ಬರುವ ಸಾಧ್ಯತೆ ಕಡಿಮೆ. ನೀರಿನ ಪೂರೈಕೆಗೆ ನಿಗಾ ವಹಿಸಿದ್ದು, ದಿನನಿತ್ಯ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ” ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ.ವಿಜಯಕುಮಾರ್ ತಿಳಿಸಿದ್ದಾರೆ.

ಅಭಾವ ಪರಿಸ್ಥಿತಿ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಗೆ ಮೇವು ಸಾಗಾಟವನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಸಂಗ್ರಹದಲ್ಲಿರುವ ಮೇವು ಮಾರ್ಚ್ ಅಂತ್ಯದವರೆಗೆ ಸಾಕಾಗುತ್ತದೆ.

ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೇವಿನ ಬೀಜಗಳನ್ನು ಒಂದು ತಿಂಗಳ ಹಿಂದೆ ವಿತರಿಸಲಾಗಿದೆ. ಮುಂದಿನ ತಿಂಗಳು ಮೇವು ಕಟಾವು ಹಂತಕ್ಕೆ ಬರುವುದರಿಂದ, ಮೇವಿನ ಕೊರತೆ ಆಗಲಾರದು. ನೀರಾವರಿ ಸೌಲಭ್ಯ ಇರುವಲ್ಲಿ ಗೋಶಾಲೆ ಆರಂಭಿಸಲು ಕೂಡ ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.