ADVERTISEMENT

ನೂತನ ವಿನ್ಯಾಸದ ಸಮುದ್ರ ತಡೆಗೋಡೆ ಕಾಮಗಾರಿಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಮರವಂತೆ–ತ್ರಾಸಿಯಲ್ಲಿ ನಿರ್ಮಾಣವಾಗಲಿರುವ ನೂತನ ವಿನ್ಯಾಸದ ಸಮುದ್ರ ತಡೆಗಟ್ಟು ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ನಡೆದಿವೆ (ಬೈಂದೂರು ಚಿತ್ರ)
ಮರವಂತೆ–ತ್ರಾಸಿಯಲ್ಲಿ ನಿರ್ಮಾಣವಾಗಲಿರುವ ನೂತನ ವಿನ್ಯಾಸದ ಸಮುದ್ರ ತಡೆಗಟ್ಟು ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ನಡೆದಿವೆ (ಬೈಂದೂರು ಚಿತ್ರ)   

ಬೈಂದೂರು: ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ತೀವ್ರ ಸಮುದ್ರ ಕೊರೆತ ನಡೆಯುವ ಸ್ಥಳಗಳಲ್ಲಿ ಏಷ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್‌ (ಎಡಿಬಿ) ನೆರವಿನಿಂದ ₹641 ಕೋಟಿ ವೆಚ್ಚದಲ್ಲಿ ನೂತನ ವಿನ್ಯಾಸದ ತಡೆಗೋಡೆ ನಿರ್ಮಾಣವಾಗಲಿದ್ದು, ಅದರ ಒಂದು ಭಾಗ ಮರವಂತೆ–ತ್ರಾಸಿ ತೀರದಲ್ಲಿ ಸಚಿವರು, ಸಂಸದರು ಮತ್ತು ಶಾಸಕರಿಂದ ಗುರುವಾರ ಚಾಲನೆ ಪಡೆಯಲಿದೆ.

ಇಲ್ಲಿನ 3.5 ಕಿಲೋಮೀಟರ್‌ ಉದ್ದದ ಕಾಮಗಾರಿಯ ಅಂದಾಜು ವೆಚ್ಚ ₹92.23 ಕೋಟಿ. ಅದನ್ನು ಮೂರು ಸಂಸ್ಥೆಗಳು ಒಟ್ಟಾಗಿ ₹88.27 ಕೋಟಿಯಲ್ಲಿ ನಿರ್ವಹಿಸಲು ಮುಂದೆ ಬಂದಿವೆ. ಮಾರ್ಚ್ ತಿಂಗಳಿನಿಂದ ಮರವಂತೆಯ ಮಾರಸ್ವಾಮಿ ಎಂಬಲ್ಲಿ ಕಾಮಗಾರಿಯ ಪೂರ್ವಭಾವಿ ಕೆಲಸಗಳು ನಡೆಯುತ್ತ ಬಂದಿವೆ. ಕಲ್ಲುಗಳ ಸಂಗ್ರಹ, ಟೆಟ್ರಾಪಾಡ್‌ಗಳ ನಿರ್ಮಾಣ ಭರದಿಂದ ಸಾಗಿದೆ. ಕಾಮಗಾರಿ ಪೂರ್ಣಗೊಳಿಸಲು 2018ರ ನವೆಂಬರ್‌ ಗಡುವು ನೀಡಲಾಗಿದೆ.

ಗ್ರಾಯ್ನ್ ಮಾದರಿ: ಪುಣೆಯ ಕೇಂದ್ರೀಯ ಜಲಶಕ್ತಿ ಸಂಶೋಧನಾ ಕೇಂದ್ರದಿಂದ ಅನುಮೋದನೆಗೊಂಡ ಇದು ಅಲೆಗಳಿಂದ ಮರಳು ಸಮುದ್ರ ಸೇರುವುದನ್ನು ತಡೆಯುವ ಗ್ರಾಯ್ನ್ ಅಥವಾ ತಡೆಗಟ್ಟುಗಳಿಂದ ಕೂಡಿರುತ್ತದೆ. ನಿರ್ದಿಷ್ಟ ಅಂತರದಲ್ಲಿ ರಚನೆಯಾಗುವ ಈ ತಡೆಗಟ್ಟುಗಳು ದಂಡೆಯಿಂದ ಸಮುದ್ರದತ್ತ ಚಾಚಿರುತ್ತವೆ. ಇಲ್ಲಿನ 3. 5 ಕಿ.ಮೀ. ವ್ಯಾಪ್ತಿಯಲ್ಲಿ 15 ನೇರ ಮತ್ತು 9 ‘ಟಿ’ ಆಕೃತಿಯ ತಡೆಗಟ್ಟುಗಳಿರುತ್ತವೆ. ಇವುಗಳ
ನಿರ್ಮಾಣದ ಬಳಿಕ ಅವುಗಳ ಮುಂಚಾಚಿನವರೆಗೆ ಮರಳಿನ ದಂಡೆ ನಿರ್ಮಾಣವಾಗುತ್ತದೆ. ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಮತ್ತು ವಿಹಾರಿಗಳಿಗೆ ವಿಸ್ತಾರದ ಬೀಚ್‌ ಲಭ್ಯವಾಗುತ್ತದೆ ಎನ್ನುತ್ತಾರೆ ಕಾಮಗಾರಿಯ ಉಸ್ತುವಾರಿ ನಡೆಸುತ್ತಿರುವ ತಂತ್ರಜ್ಞರು. ಇದನ್ನು ಅವರು ತೀರ ಸಂರಕ್ಷಣಾ ಕಾಮಗಾರಿ ಎಂದು ಕರೆಯುತ್ತಾರೆ.

ADVERTISEMENT

ಇತರೆಡೆಯೂ ಅನುಷ್ಠಾನ
ಇದೇ ಯೋಜನೆಯಡಿ ₹78 ಕೋಟಿ ವೆಚ್ಚದಲ್ಲಿ ನೇರ ಗ್ರಾಯ್ನ್‌ಗಳ ತಡೆಗಟ್ಟು ಉದ್ಯಾವರದಲ್ಲಿ, ₹62 ಕೋಟಿ ವೆಚ್ಚದಲ್ಲಿ ಸಮುದ್ರ ತಡೆಗೋಡೆ ಕೋಡಿಬೆಂಗ್ರೆಯಲ್ಲಿ, ₹90 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣ ಎರ್ಮಾಳಿನಲ್ಲಿ ನಿರ್ಮಾಣವಾಗಲಿವೆ. ಸಹಜ ಸಸ್ಯ ಬೆಳೆಸಿ ಸಮುದ್ರ ಕೊರೆತ ತಡೆಯುವ ಯೋಜನೆ ಕೋಡಿಕನ್ಯಾನದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.