ADVERTISEMENT

ನೂರು ವರ್ಷ ಬದುಕುವ ಆಸೆ ಹೊತ್ತ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:52 IST
Last Updated 5 ಮಾರ್ಚ್ 2018, 19:52 IST
ನೂರು ವರ್ಷ ಬದುಕುವ ಆಸೆ ಹೊತ್ತ ಸಿದ್ದರಾಮಯ್ಯ
ನೂರು ವರ್ಷ ಬದುಕುವ ಆಸೆ ಹೊತ್ತ ಸಿದ್ದರಾಮಯ್ಯ   

ಚಾಮರಾಜನಗರ: ‘ನನಗೀಗ 70 ವರ್ಷ 6 ತಿಂಗಳು. ಇನ್ನೂ ಗಟ್ಟಿಮುಟ್ಟಾಗಿದ್ದೇನೆ. 100 ವರ್ಷ ಬದುಕಬೇಕು ಎಂದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ದಿ.ಎಚ್‌.ಎಸ್‌.ಮಹದೇವ ಪ್ರಸಾದ್‌ ಕುರಿತ ‘ಮಹಾಪ್ರಸಾದ’ ಸಂಸ್ಮರಣ ಸಂಪುಟ ಬಿಡುಗಡೆ ಮಾಡಿ ಮಾತನಾಡಿದರು.

‘ಪ್ರತಿಯೊಬ್ಬರೂ 100 ವರ್ಷ ಬಾಳುವಂತಾಗಬೇಕು. ನಮ್ಮ ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ. ಹಿಂದಿನ ಜನ್ಮದ ಪಾಪದ ಫಲ, ಇನ್ನೊಂದು ಜನ್ಮದಲ್ಲಿ ಹುಟ್ಟುತ್ತೇವೆ ಎಂಬಂತಹ ಮಾತುಗಳಲ್ಲಿ ನನಗೆ ನಂಬಿಕೆ ಇಲ್ಲ. ಹಣೆ ಬರಹವನ್ನು ಯಾವ ಬ್ರಹ್ಮನೂ ಬರೆಯುವುದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಈ ರೀತಿಯ ಮೌಢ್ಯ, ಕಂದಾಚಾರಗಳನ್ನು ಬಿತ್ತಿ ನಂಬಿಸುತ್ತಿವೆ. ಅವೆಲ್ಲವೂ ಮಿಥ್ಯೆ. ಅವುಗಳನ್ನು ನಂಬಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ನಾವು ಬಸವಾದಿ ಶರಣರ ಅನುಯಾಯಿಗಳು. ಬಸವಣ್ಣ ಎಲ್ಲಿಯೂ ಸ್ವರ್ಗ, ನರಕದ ಬಗ್ಗೆ ಹೇಳಿಲ್ಲ. ಅವರ ವಚನಗಳನ್ನು ಹೇಳುವವರು ಈ ಕಂದಾಚಾರಗಳನ್ನು ನಂಬುತ್ತಿರುವುದು ವಿಪರ್ಯಾಸ. ಮೌಢ್ಯಗಳನ್ನು ನಂಬದಿರುವುದೇ ನಾವು ಶರಣರಿಗೆ ನೀಡುವ ಗೌರವ’ ಎಂದರು.

‘ಸೆಲ್ಫಿ ಹಿಂಸೆ ಆಗಿದೆ’
‘ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬೀಳುತ್ತಿರುವುದು ನನಗೆ ದೊಡ್ಡ ಹಿಂಸೆ ಆಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಹಾಲಹಳ್ಳಿ ಗ್ರಾಮದಲ್ಲಿ ಎಚ್‌.ಎಸ್‌.ಮಹದೇವಪ್ರಸಾದ್ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಹೊರಬರುತ್ತಿದ್ದಾಗ ಮುಖ್ಯಮಂತ್ರಿ ಆಪ್ತರೊಬ್ಬರು, ‘ನಿಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಲು ಜನ ಕಾಯುತ್ತಿದ್ದಾರೆ’ ಎಂದರು.

ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿ, ‘ಅಯ್ಯೋ, ಎಲ್ಲಿ ಹೋಗ್ಲಿ ಕಣಪ್ಪ. ಮದುವೆಗಳಿಗೆ ಹೋದಾಗ ಹೆಂಗಸರು ನನ್ನನ್ನು ಹಿಡಿದುಕೊಂಡು ಸೆಲ್ಫಿ, ಸೆಲ್ಫಿ ಎಂದು ಫೋಟೊ ತೆಗೆಸಿಕೊಳ್ಳಲು ಶುರುಮಾಡಿದ್ದಾರೆ. ಇದು ನನಗೆ ದೊಡ್ಡ ಹಿಂಸೆ ಆಗಿಬಿಟ್ಟಿದೆ’ ಎಂದು ನಗುತ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.