ADVERTISEMENT

ನೇತ್ರಾವತಿ ತಿರುವು ಯೋಜನೆ ಅವೈಜ್ಞಾನಿಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಹಾಸನ: `ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹಳ್ಳ ತಿರುವು ಯೋಜನೆ ಅವೈಜ್ಞಾನಿಕವಾಗಿದ್ದು, ಅದು ಕಾರ್ಯಸಾಧುವಲ್ಲ. ಈ ಯೋಜನೆಯನ್ನು ಕೈಬಿಡಬೇಕು~ ಎಂದು ಹಾಸನ ಜಿಲ್ಲೆಯ ವಿವಿಧ ಪರಿಸರಪ್ರೇಮಿ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ~ತುಮಕೂರು, ಕೋಲಾರ ಜಿಲ್ಲೆಗಳಿಗೆ ನೀರು ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ಯೋಜನೆಯಿಂದ ಆ ಜಿಲ್ಲೆಗಳಿಗೆ ನೀರು ಕೊಡಲು ಸಾಧ್ಯವೇ ಇಲ್ಲ~ ಎಂದರು.

~ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಇನ್ನಷ್ಟು ಯೋಜನೆಗಳನ್ನು ಸಹಿಸುವ ಶಕ್ತಿ ಪಶ್ಚಿಮ ಘಟ್ಟಕ್ಕೆ ಇಲ್ಲ. ಅದೂ ಅಲ್ಲದೆ ನೇತ್ರಾವತಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಪರಮಶಿವಯ್ಯ ಅವರು ನೀಡಿರುವ ಪ್ರಾಥಮಿಕ ವರದಿಯೂ ವೈಜ್ಞಾನಿಕವಾದುದಲ್ಲ.

ಎತ್ತಿನಹಳ್ಳದಲ್ಲಿ ಅಣೆಕಟ್ಟು ನಿರ್ಮಿಸಿದರೆ ಎರಡು ಜಿಲ್ಲೆಗಳಿಗಾಗುವಷ್ಟು ನೀರು ಸಂಗ್ರಹಿಸಲು ಸಾಧ್ಯವಿಲ್ಲ. ನೇತ್ರಾವತಿ ಪೂರ್ಣಪ್ರಮಾಣದ ನದಿಯ ಸ್ವರೂಪ ಪಡೆಯುವುದೇ ಗುಂಡ್ಯದ ನಂತರ. ಅಲ್ಲಿಯವರೆಗೆ ಅದು ಸಣ್ಣ ತೊರೆಯಾಗಿ ಮಾತ್ರ ಹರಿಯುತ್ತದೆ. ಗುಂಡ್ಯದಿಂದ ನೀರು ಸರಬರಾಜು ಮಾಡಬೇಕಾದರೆ ನೀರನ್ನು ಕನಿಷ್ಠ ಒಂದು ಸಾವಿರ ಅಡಿಯಷ್ಟು ಮೇಲಕ್ಕೆ ಎತ್ತಬೇಕಾಗುತ್ತದೆ. ಇದು ಅವೈಜ್ಞಾನಿಕ ಯೋಜನೆಯಾಗುತ್ತದೆ~ ಎಂದರು.

ಬೇಸಿಗೆ ವೇಳೆಯಲ್ಲಿ ನೇತ್ರಾವತಿಯಲ್ಲೇ ನೀರಿರುವುದಿಲ್ಲ. ಈ ನದಿಯನ್ನು ಸಂಪೂರ್ಣವಾಗಿ ತಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಮತ್ಸ್ಯೋದ್ಯಮ ಸಂಕಷ್ಟದಲ್ಲಿ ಸಿಲುಕುತ್ತದೆ. ಹಲವು ಅಪಾಯಗಳಿಗೆ ಈ ಯೋಜನೆ ಕಾರಣವಾಗುತ್ತದೆ. ಇದನ್ನು ಅನುಷ್ಠಾನಗೊಳಿಸಲೇ ಬಾರದು ಎಂದು ಅವರು ಆಗ್ರಹಿಸಿದರು.

ನೇತ್ರಾವತಿ ತಿರುವು ಯೋಜನೆಯನ್ನು ಜಾರಿಗೊಳಿಸಲು ಮುಂದಾದರೆ ಎಲ್ಲ ಸಂಘಟನೆಗಳು ಸೇರಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದರು.

ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್, ಪರಿಸರವಾದಿ ಎಚ್.ಪಿ. ಮೋಹನ್, ಪತ್ರಕರ್ತ ಆರ್.ಪಿ. ವೆಂಕಟೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಮನುಕುಮಾರ್, ಅನುಗನಾಳು ಕೃಷ್ಣಮೂರ್ತಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.