ADVERTISEMENT

ನೇತ್ರಾವತಿ ತಿರುವು ಯೋಜನೆ ಇಲ್ಲ: ಸಿಎಂ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬುಧವಾರ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

ಐದು ಜಿಲ್ಲೆಗಳಲ್ಲಿ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಒದಗಿಸುವ ಸಂಬಂಧ ಕಾಂಗ್ರೆಸ್‌ನ ವಿ.ಆರ್.ಸುದರ್ಶನ್ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, `ನೇತ್ರಾವತಿ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ವಿಷಯದಲ್ಲಿ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರಕ್ಕೆ ಧಕ್ಕೆ ಆಗುವಂತಹ ಯಾವುದೇ ಯೋಜನೆಯನ್ನೂ ಸರ್ಕಾರ ಕೈಗೆತ್ತಿಕೊಳ್ಳುವುದಿಲ್ಲ~ ಎಂದರು.

`ನೇತ್ರಾವತಿ ತಿರುವು ಯೋಜನೆ ಎಂಬುದು ಸಾಧ್ಯವಿಲ್ಲದ ಮಾತು. 2002-03ರಲ್ಲಿ ಈ ಬಗ್ಗೆ ಚರ್ಚೆ ಆರಂಭವಾದಾಗ ನಾನು ಶಾಸಕನಾಗಿದ್ದೆ. ಆಗಲೇ ಅದನ್ನು ವಿರೋಧಿಸಿದ್ದೆ. ಪಶ್ಚಿಮ ಘಟ್ಟಕ್ಕೆ ಹಾನಿಯಾಗುವಂತಹ ಯೋಜನೆಗಳಿಗೆ ನನ್ನ ವಿರೋಧವಿದೆ. ಸ್ಥಾನ ಬದಲಾದರೂ ನಿಲುವಿನಲ್ಲಿ ಯಾವುದೇ ಬದಲಾವಣೆಯೂ ಇಲ್ಲ~ ಎಂದರು.

`ಬಯಲು ಸೀಮೆ ಈ ಐದೂ ಜಿಲ್ಲೆಗಳು ಎದುರಿಸುತ್ತಿರುವ ನೀರಿನ ಸಮಸ್ಯೆ ಪರಿಹರಿಸುವುದು ಸರ್ಕಾರದ ಕರ್ತವ್ಯ. ಇದಕ್ಕಾಗಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಸಲ್ಲಿಸಿರುವ ಮೂರು ವರದಿಗಳು ಸರ್ಕಾರದ ಮುಂದಿವೆ. ನೇತ್ರಾವತಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವುದು (ತಿರುವು ಅಲ್ಲ), ಸಕಲೇಶಪುರ ಬಳಿ ಎತ್ತಿನಹೊಳೆಯಿಂದ ನೀರು ತರುವುದು ಮತ್ತು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಈ ಜಿಲ್ಲೆಗಳಿಗೆ ನೀರು ಒದಗಿಸುವ ಪ್ರಸ್ತಾವಗಳಿವೆ.

ಈ ಪೈಕಿ ಒಂದು ಯೋಜನೆ ಮೂಲಕ ಈ ಜಿಲ್ಲೆಗಳಿಗೆ ನೀರು ಒದಗಿಸಲಾಗುವುದು~ ಎಂದು ತಿಳಿಸಿದರು.
`ಕಾವೇರಿ, ಕೃಷ್ಣಾ ನದಿಗಳ ವಿಚಾರ ಬಂದಾಗಲೆಲ್ಲ ಪಕ್ಷಭೇದ ಮರೆತು ಒಟ್ಟಾಗಿ ನಿಂತಿದ್ದೇವೆ. ಅದೇ ರೀತಿ ಬಯಲು ಸೀಮೆಯ ಐದು ಜಿಲ್ಲೆಗಳಿಗೆ ನೀರು ಒದಗಿಸುವ ವಿಷಯದಲ್ಲೂ ಪ್ರಾದೇಶಿಕತೆ ಮತ್ತು ಪಕ್ಷ ಮರೆತು ಒಟ್ಟಾಗಬೇಕು. ಸಹಮತದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ಚುನಾವಣೆ ಬಂದಾಗ ಒಂದು ತಿಂಗಳು ರಾಜಕಾರಣ ಮಾಡೋಣ. ಉಳಿದ ನಾಲ್ಕು ವರ್ಷ 11 ತಿಂಗಳು ಅಭಿವೃದ್ಧಿ ಕೆಲಸ ಮಾಡೋಣ~ ಎಂದು ಸದಸ್ಯರಿಗೆ ಮನವಿ ಮಾಡಿದರು.

ಕಾವೇರಿದ ಚರ್ಚೆ: ವಿಷಯ ಪ್ರಸ್ತಾಪಿಸಿ ಮಾತನಾಡಿದ ಸುದರ್ಶನ್, ಈ ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೆ ಈ ಪ್ರದೇಶ ಮರಳುಗಾಡು ಆಗುತ್ತದೆ ಎಂದರು.

ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ಈ ಬೇಡಿಕೆಗೆ ದನಿಗೂಡಿಸಿದರು. ಆದರೆ, ಈ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದಲೂ ನೀರು ತರಬಹುದೆಂದು ಸುದರ್ಶನ್ ಅವರು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಸದಸ್ಯರಾದ ಎಸ್.ಆರ್.ಪಾಟೀಲ, ವೀರಣ್ಣ ಮತ್ತಿಕಟ್ಟಿ, ಅಲ್ಲಮಪ್ರಭು ಪಾಟೀಲ ಅವರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ  `ನೇತ್ರಾವತಿ ತಿರುವು ಯೋಜನೆ~ಗೆ ವಿರೋಧ ವ್ಯಕ್ತಪಡಿಸಿದರು. ಮಳೆಗಾಲದ ಅವಧಿಯಲ್ಲಿ ಮಾತ್ರ ನೇತ್ರಾವತಿ  ನೀರನ್ನು ಈ ಪ್ರದೇಶಕ್ಕೆ ಹರಿಸಲು ತಮ್ಮ ಸಮ್ಮತಿ ಇದೆ. ಆದರೆ, ನದಿ ತಿರುವು ಸಲ್ಲ ಎಂದರು. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಗಣೇಶ್ ಕಾರ್ಣಿಕ್ ಇತರರು ಆಚಾರ್ಯ ಅವರನ್ನು ಬೆಂಬಲಿಸಿದರು.

ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರದಲ್ಲಿ ವಿರಾಜಪೇಟೆ ತಾಲ್ಲೂಕಿನ ಕೊಂಗನಹೊಳೆ ಮತ್ತು ಕಕ್ಕಟ್ಟು ಹೊಳೆಯಿಂದ 11.24 ಟಿಎಂಸಿ ಅಡಿ ನೀರನ್ನು ಲಕ್ಷ್ಮಣತೀರ್ಥ ನದಿಗೆ ಹರಿಸಿ, ಅಲ್ಲಿಂದ ಬೆಂಗಳೂರು ನಗರಕ್ಕೆ ಪೂರೈಸುವ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, `ಈ ಯೋಜನೆ ಕೈಗೆತ್ತಿಕೊಂಡರೆ ವಿರಾಜಪೇಟೆ ತಾಲ್ಲೂಕು ಸಂಪೂರ್ಣ ಮುಳುಗಡೆ ಆಗುತ್ತದೆ. ಕೊಡಗು ಜಿಲ್ಲೆಯ ಜನರ ಸಮಾಧಿ ಮೇಲೆ ನೀವು ಈ ಯೋಜನೆ ಕೈಗೆತ್ತಿಕೊಳ್ಳಬೇಕಾಗುತ್ತದೆ~ ಎಂದು ಎಚ್ಚರಿಸಿದರು. ಬಳಿಕ ಪ್ರತಿಕ್ರಿಯಿಸಿದ ಬೊಮ್ಮಾಯಿ, `ಹಳೆಯ ಮಾಹಿತಿ ತಪ್ಪಾಗಿ ಉತ್ತರದಲ್ಲಿ ಸೇರಿದೆ. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವ ಇಲ್ಲ~ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಈ ಭಾಗಕ್ಕೆ ನೀರು ಒದಗಿಸುವುದಕ್ಕೆ ಸಹಮತ ವ್ಯಕ್ತಪಡಿಸಿದ ವಿರೋಧಪಕ್ಷದ ನಾಯಕಿ ಮೋಟಮ್ಮ, ಕುಡಿಯುವ ನೀರಿಗಾಗಿ ಭದ್ರಾ ನದಿಯ ನೀರು ತನ್ನಿ. ಆದರೆ, ಕೃಷಿ ನೀರಾವರಿಗಾಗಿ ನೀರು ಕಬಳಿಸಬಾರದು ಎಂದರು.

ಕೇಂದ್ರ ಸಚಿವರಿಗೆ ಆಹ್ವಾನ
ಈ ಐದು ಜಿಲ್ಲೆಗಳಿಗೆ ನೀರು ಒದಗಿಸುವ ಸಂಬಂಧ ಚರ್ಚಿಸಲು ಗುರುವಾರ ಸಂಜೆ ವಿಧಾನಸೌಧದಲ್ಲಿ ಸಭೆ ನಿಗದಿ ಮಾಡಲಾಗಿದೆ. ಆ ಭಾಗದ ಸಚಿವರು, ಶಾಸಕರು ಮತ್ತು ಸಂಸದರು ಸಭೆಯಲ್ಲಿ ಪಾಲ್ಗೊಳ್ಳುವರು. ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಅವರನ್ನು ಸಭೆಗೆ ಆಹ್ವಾನಿಸಿ ಈಗಾಗಲೇ ಪತ್ರ ಬರೆಯಲಾಗಿದೆ.

ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸುವ ಈ ಸಭೆಯಲ್ಲಿ ಐದು ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬರಲಾಗುವುದು ಎಂದ ಮುಖ್ಯಮಂತ್ರಿ ಸದಾನಂದಗೌಡ , ಆ ಜಿಲ್ಲೆಗಳನ್ನು ಪ್ರತಿನಿಧಿಸುವ ಸದಸ್ಯರಿಗೆ ಸದನದಲ್ಲೇ ಸಭೆಗೆ ಆಹ್ವಾನ ನೀಡಿದರು.

`ಎತ್ತಿನಹೊಳೆ ಯೋಜನೆಗೆ ಈ ಹಣಕಾಸು ವರ್ಷದ ಬಜೆಟ್‌ನಲ್ಲಿ ರೂ 200 ಕೋಟಿ ಒದಗಿಸಲಾಗಿದೆ. ಅದನ್ನು ಬಳಕೆ ಮಾಡುವ ವಿಷಯದಲ್ಲಿ ನಾನು ಬದ್ಧವಾಗಿದ್ದೇನೆ. ಈ ಹಣವನ್ನು ಸಂಬಂಧಿಸಿದ ನೀರಾವರಿ ನಿಗಮಕ್ಕೆ ವರ್ಗಾವಣೆ ಮಾಡಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT