ADVERTISEMENT

ನೈಸ್‌, ಬಿಇಟಿಎಲ್‌ ಟೋಲ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:30 IST
Last Updated 5 ಜುಲೈ 2017, 20:30 IST
ನೈಸ್‌, ಬಿಇಟಿಎಲ್‌ ಟೋಲ್‌ ಹೆಚ್ಚಳ
ನೈಸ್‌, ಬಿಇಟಿಎಲ್‌ ಟೋಲ್‌ ಹೆಚ್ಚಳ   

ಬೆಂಗಳೂರು: ‘ನೈಸ್‌’ ಮತ್ತು ‘ಬಿಇಟಿಎಲ್‌’ ಕಂಪೆನಿಗಳು ಟೋಲ್‌ ದರವನ್ನು (ರಸ್ತೆ ಶುಲ್ಕ ದರ) ಜುಲೈ 1ರಿಂದಲೇ ಅನ್ವಯವಾಗುವಂತೆ ಹೆಚ್ಚಳ ಮಾಡಿವೆ.
ನೈಸ್‌ ಆಡಳಿತ ಮಂಡಳಿ  ನೈಸ್‌ ರಸ್ತೆಯ ಟೋಲ್‌ ದರಗಳನ್ನು ಶೇ10ರಿಂದ 15ರಷ್ಟು ಹೆಚ್ಚಿಸಿದೆ.

‘ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಟೋಲ್ ರಿಯಾಯಿತಿ ಒಪ್ಪಂದದಂತೆ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳ ಮಾಡಬಹುದು. ಆದರೂ ಕಂಪೆನಿ ನಾಲ್ಕು ವರ್ಷಗಳಿಂದ ದರ ಹೆಚ್ಚಿಸಿರಲಿಲ್ಲ. ಪರಿಷ್ಕೃತ ದರಗಳು ವಾಸ್ತವವಾಗಿ ಕಂಪೆನಿ ಮಾಡಿಕೊಂಡ ಒಪ್ಪಂದದಂತೆ ವಿಧಿಸಬೇಕಾದ ದರಕ್ಕಿಂತ ಕಡಿಮೆ ಇದೆ. ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ’ ಎಂದು ಕಂಪೆನಿ ಸಮಜಾಯಿಷಿ ನೀಡಿದೆ.

ದರ ಪರಿಷ್ಕರಣೆಯ ಬಳಿಕವೂ ಟೋಲ್‌ ದರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಎಕ್ಸ್‌ಪ್ರೆಸ್‌ ವೇ ದರಕ್ಕಿಂತ ಕಡಿಮೆ ಇದೆ ಎಂದು ಕಂಪೆನಿ ಹೇಳಿಕೊಂಡಿದೆ.

ಬಿಇಟಿಎಲ್‌ ಶುಲ್ಕ: ಎಲೆಕ್ಟ್ರಾನಿಕ್‌ ಸಿಟಿ ಮತ್ತು ಅತ್ತಿಬೆಲೆಯಲ್ಲಿ ಟೋಲ್‌ ಪ್ಲಾಜಾ ನಿರ್ವಹಿಸುವ ‘ಬೆಂಗಳೂರು ಟೋಲ್‌ವೇ ಪ್ರೈವೇಟ್‌ ಲಿಮಿಟೆಡ್‌’ (ಬಿಇಟಿಎಲ್‌) ಎಲ್ಲ ಮಾದರಿಯ ವಾಹನಗಳ ಟೋಲ್‌ ಶುಲ್ಕವನ್ನು ಪರಿಷ್ಕರಿಸಿದೆ.



ದ್ವಿಚಕ್ರ ವಾಹನಗಳ ಶುಲ್ಕವನ್ನು ಪ್ರತಿ ಟ್ರಿಪ್‌ಗೆ ₹ 15 ರಿಂದ 20ಕ್ಕೆ  ಹೆಚ್ಚಿಸಲಾಗಿದೆ. ಕಾರುಗಳ ಶುಲ್ಕವನ್ನು ₹ 65ರಿಂದ 70ಕ್ಕೆ ಹೆಚ್ಚಿಸಲಾಗಿದೆ. ದ್ವಿಚಕ್ರ ವಾಹನಗಳ ತಿಂಗಳ ಪಾಸ್‌ ದರ ₹ 515ರಿಂದ ₹ 545 ಹಾಗೂ ಕಾರುಗಳ ದರ ₹ 1,290ರಿಂದ ₹ 1,365ಕ್ಕೆ ಹೆಚ್ಚಿಸಲಾಗಿದೆ.

‘2008ಕ್ಕೂ ಮೊದಲು ಮಂಜೂರಾತಿ ಪಡೆದ ಟೋಲ್‌ ಪ್ಲಾಜಾಗಳಲ್ಲಿ ಏಪ್ರಿಲ್‌ 1 ರಿಂದಲೇ ದರ ಪರಿಷ್ಕರಿಸಲಾಗಿದೆ. ಉಳಿದ ಟೋಲ್‌ಗಳಲ್ಲಿ ಅವು ಮಂಜೂರಾದ ದಿನಕ್ಕೆ ಅನುಗುಣವಾಗಿ ಜುಲೈ 1 ಮತ್ತು ಸೆ. 1ರಿಂದ ಶುಲ್ಕ ಪರಿಷ್ಕರಿಸಲಾಗುತ್ತದೆ. ಬಿಇಟಿಎಲ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡ ಟೋಲ್‌ಗಳಲ್ಲಿ ಜುಲೈ 1 ರಿಂದ ದರ ಪರಿಷ್ಕರಣೆ ಆಗಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿ ವೈ.ವಿ. ಪ್ರಸಾದ್‌ ತಿಳಿಸಿದರು.

‘ನಿಯಮಗಳಲ್ಲೇ ದರ ಹೆಚ್ಚಳಕ್ಕೆ ಅವಕಾಶ ಇದ್ದು, ಎನ್‌ಎಚ್‌ಎಐ ಒಪ್ಪಿಗೆ ನೀಡಿದೆ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT