ADVERTISEMENT

ನೋಂದಣಿ ಸಂಖ್ಯೆ ತಿದ್ದುಪಡಿಗೆ ₹ 3000 ದಂಡ

ವಿಟಿಯು ಕ್ರಮದ ವಿರುದ್ಧ ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ವಿದ್ಯಾರ್ಥಿಗಳಿಗೆ ದುಬಾರಿ ದಂಡ ವಿಧಿಸುವುದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ವಿಟಿಯು ಆವರಣದಲ್ಲಿ ಪ್ರತಿಭಟನೆ ನಡೆಸಿದರು
ವಿದ್ಯಾರ್ಥಿಗಳಿಗೆ ದುಬಾರಿ ದಂಡ ವಿಧಿಸುವುದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ವಿಟಿಯು ಆವರಣದಲ್ಲಿ ಪ್ರತಿಭಟನೆ ನಡೆಸಿದರು   

ಬೆಳಗಾವಿ:‌ ಉತ್ತರ ಪತ್ರಿಕೆಯಲ್ಲಿ ವಿಶ್ವವಿದ್ಯಾಲಯ ಸಂಖ್ಯೆ ನಮೂದಿಸದ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ತಲಾ ₹ 1,500 ದಂಡ ವಿಧಿಸುತ್ತಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ವಿಟಿಯು ಆಡಳಿತ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘‌1, 3, 5 ಹಾಗೂ 7ನೇ ಸೆಮಿಸ್ಟರ್‌ಗಳ ಒಟ್ಟು 660 ವಿದ್ಯಾರ್ಥಿಗಳಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಬೆಳಗಾವಿ ಮತ್ತು ಕಲಬುರ್ಗಿ  ಪ್ರಾದೇಶಿಕ ಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿಟಿಯುನಿಂದ ಇ–ಮೇಲ್ ಕಳುಹಿಸಿ, ಶುಕ್ರವಾರ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ದಂಡದ ಮಾಹಿತಿ ನೀಡಿರಲಿಲ್ಲ’ ಎಂದು ಎಬಿವಿಪಿ (ವೃತ್ತಿ ಶಿಕ್ಷಣ) ಮುಖಂಡ ಗಿರೀಶ ಬಡಿಗೇರ ದೂರಿದರು.

‘ವಿದ್ಯಾರ್ಥಿಗಳು ಅಲ್ಪಸ್ವಲ್ಪ ಹಣ ತೆಗೆದುಕೊಂಡು ಬಂದಿದ್ದರು. ಇಲ್ಲಿ ಏಕಾಏಕಿ ಹೆಚ್ಚಿನ ಹಣ ತುಂಬುವಂತೆ ತಿಳಿಸಿದ್ದರಿಂದ ತೊಂದರೆ ಅನುಭವಿಸಬೇಕಾಯಿತು’ ಎಂದು ಅವರು ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ವ್ಯತ್ಯಾಸವಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ದಂಡ ವಸೂಲಿ ಸರಿಯಲ್ಲ. ಅಲ್ಲದೇ, ಆ ವಿದ್ಯಾರ್ಥಿಗಳ ಫಲಿತಾಂಶವನ್ನೂ ತಡೆಹಿಡಿಯಲಾಗಿದೆ. ದಂಡ ಪಾವತಿಸಲೇಬೇಕು ಎಂದಾದಲ್ಲಿ ಪ್ರಮಾಣ ಕಡಿಮೆ ಇರಬೇಕು. ಮೇಲ್ವಿಚಾರಕರು ಪಾವತಿಸುವುದಿಲ್ಲ. ಕೊನೆಗೆ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ವಿದ್ಯಾರ್ಥಿಗಳ ಹಿತ ಕಾಪಾಡಲು ವಿಟಿಯು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವರು ಭರವಸೆ ನೀಡಿದರು. ಹೀಗಾಗಿ, ಪ್ರತಿಭಟನೆ ಹಿಂಪಡೆದೆವು. ಇದೇ 24ರಂದು ಮೈಸೂರು ಹಾಗೂ ಬೆಂಗಳೂರು ಪ್ರಾದೇಶಿಕ ಕೇಂದ್ರದ ಕಾಲೇಜುಗಳ ವಿದ್ಯಾರ್ಥಿಗಳು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ತಪ್ಪಿಗೆ ದಂಡ ಕಟ್ಟಲೇಬೇಕು’

‘ದಂಡ ಕಟ್ಟಬೇಕು ಎನ್ನುವ ವಿಷಯವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು’ ಎಂದು ಕುಲಸಚಿವ ಜಗನ್ನಾಥರೆಡ್ಡಿ ಪ್ರತಿಕ್ರಿಯಿಸಿದರು.

‘600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಬಾರ್‌ಕೋಡ್‌ ಮೇಲೆ ಸ್ಕ್ರಾಚ್‌ ಮಾಡಿದ್ದರು. ವಿಶ್ವವಿದ್ಯಾಲಯದ ಸಂಖ್ಯೆ ಬರೆದಿಲ್ಲ. ಇದರಿಂದಾಗಿ ಆ ಉತ್ತರ ಪತ್ರಿಕೆಗಳು ಯಾರದು ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ, ಫಲಿತಾಂಶ ಪ್ರಕಟಿಸಲಾಗಿಲ್ಲ. 20 ಲಕ್ಷ ಬುಕ್‌ಲೆಟ್‌ಗಳಲ್ಲಿ, ಸಂಖ್ಯೆ ನಮೂದಿಸದ ಬುಕ್‌ಲೆಟ್‌ಗಳನ್ನು ಪತ್ತೆ ಹಚ್ಚಲು ಕಷ್ಟವಾಯಿತು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ₹1,500 ದಂಡ ವಿಧಿಸಿದ್ದೇವೆ. ಸಂಬಂಧಿಸಿದ ಮೇಲ್ವಿಚಾರಕರೂ ₹ 1,500 ಕಟ್ಟಬೇಕು. ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.