ADVERTISEMENT

ಪಕ್ಷಾಂತರಿಗಳ ದೊಡ್ಡ ಪರಂಪರೆ

ಪ್ರಕಾಶ ಕುಗ್ವೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಶಿವಮೊಗ್ಗ: ಪಕ್ಷಾಂತರಕ್ಕೆ ಶಿವಮೊಗ್ಗ ಜಿಲ್ಲೆ ಹೆಸರುವಾಸಿ. ಜಿಲ್ಲೆಯಲ್ಲಿ ಪಕ್ಷಾಂತರಿಗಳ ದೊಡ್ಡ ಪರಂಪರೆಯೇ ಇದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಆರಂಭಿಸಿದ ಜಿಗಿಯುವ ಆಟವನ್ನು ಇಂದು ಅವರ ಶಿಷ್ಯರು, ಎದುರಾಳಿಗಳು ರೂಢಿ ಮಾಡಿಕೊಂಡಿದ್ದಾರೆ.

ಹಿರಿಯರಾದರೂ ಇನ್ನೂ ಸಕ್ರಿಯರಾಗಿರುವ ಮಾಜಿ ಸಚಿವರಾದ ಜಿ. ಬಸವಣ್ಣಪ್ಪ, ಕಾಗೋಡು ತಿಮ್ಮಪ್ಪ, ಬಿಜೆಪಿಯ ಆಯನೂರು ಮಂಜುನಾಥ ಹಾರಾಟಕ್ಕೆ ಹೆಸರಾದರು.
ಪಕ್ಷಾಂತರ ಪರ್ವಕ್ಕೆ ಮುನ್ನಡಿ ಬರೆದ ಬಂಗಾರಪ್ಪ ವಿಧಾನಸಭೆಗೆ ಸ್ಪರ್ಧಿಸಿದ್ದು 7 ಬಾರಿ, ಪಕ್ಷ ಬದಲಿಸಿದ್ದು 5 ಬಾರಿ. ಲೋಕಸಭೆಗೆ 6 ಬಾರಿ ಸ್ಪರ್ಧಿಸಿದ್ದ ಬಂಗಾರಪ್ಪ, ಹಲವು ಪಕ್ಷಗಳನ್ನು ಸೃಷ್ಟಿಸಿದ ದಾಖಲೆಯನ್ನೂ ಬರೆದಿದ್ದರು.

ಜಿಗಿತದಲ್ಲಿ ಬಂಗಾರಪ್ಪ ಅವರನ್ನೂ ಮೀರಿಸಿದವರು ಮಾಜಿ ಸಚಿವ ಜಿ. ಬಸವಣ್ಯಪ್ಪ (83). ಇವರು ಶಾಂತವೇರಿ ಗೋಪಾಲಗೌಡರ ಸಮಕಾಲೀನರು. ಹಾಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ. ಇದುವರೆಗೂ ನಡೆದ ಹದಿಮೂರು ವಿಧಾನಸಭಾ ಚುನಾವಣೆಯಲ್ಲಿ 7 ಬಾರಿ ಸ್ಪರ್ಧಿಸಿದ್ದ ಬಸವಣ್ಯಪ್ಪ, ಚುನಾವಣೆಗೊಂದು ಪಕ್ಷ ಬದಲಿಸಿದ್ದಾರೆ. ಪ್ರಜಾ ಸೋಷಿಯಲಿಸ್ಟ್ ಪಕ್ಷ, ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಹಿಡಿದು ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಎಲ್ಲರದಲ್ಲೂ ಒಳಹೊಕ್ಕು, ಹೊರಗೆ ಬಂದಿದ್ದಾರೆ. ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದಾರೆ.

ತದನಂತರದ ಸ್ಥಾನದಲ್ಲಿರುವವರು ಕಾಗೋಡು ತಿಮ್ಮಪ್ಪ. ಐದು ದಶಕದ ಅವರ ರಾಜಕೀಯ ಜೀವನದಲ್ಲಿ 4 ಬಾರಿ ಪಕ್ಷ ಬದಲಿಸಿದ್ದಾರೆ. ಪ್ರಜಾ ಸೋಷಿಯಲಿಸ್ಟ್ ಪಕ್ಷ, ಸಂಯುಕ್ತ ಸೋಷಿಯಲಿಸ್ಟ್ ಪಕ್ಷ, ಜನತಾ ಪಕ್ಷ ಅವರ ಪೂರ್ವದ ಪಕ್ಷಗಳು. ಆನೇಕ ಬಾರಿ ಸಚಿವರಾಗಿ ಅಧಿಕಾರದ ರುಚಿ ಕಂಡಿದ್ದು ಕಾಂಗ್ರೆಸ್‌ನಲ್ಲೇ. ಪ್ರಸ್ತುತ ಸಾಗರದಿಂದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ. 

ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಬರೂ ಬಂಗಾರಪ್ಪ ಅವರ ಶಿಷ್ಯರು. ಬಂಗಾರಪ್ಪ ಬಿಜೆಪಿಗೆ ಹಾರಿದಾಗ ಅವರ ಅಲೆಯಲ್ಲಿ ತೇಲಿ ಬಂದ ಇವರಿಬ್ಬರು ಮಧ್ಯದಲ್ಲಿ ಸ್ವಲ್ಪ ಕಾಲ ಸಮಾಜವಾದಿ ಪಕ್ಷದ ಬೈಸಿಕಲ್ ತುಳಿದರು. ಚುನಾವಣೆ ಸಮಯದಲ್ಲಿ ಗುರುವಿಗೆ ಕೈ ಕೊಟ್ಟ ಈ ಇಬ್ಬರೂ ಶಿಷ್ಯರು ಬಿಜೆಪಿಯಲ್ಲೇ ಉಳಿದು, ಟಿಕೆಟೂ ಪಡೆದು, ಮತ್ತೆ ಗೆದ್ದು ಬಂದಿದ್ದರು.

ಹಾಲಪ್ಪ ಕೆಲಕಾಲ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈಗ ಯಡಿಯೂರಪ್ಪ ಅವರ ಕೆಜೆಪಿಯ ಸೊರಬದ ಅಭ್ಯರ್ಥಿಯಾಗಿದ್ದಾರೆ.ಬಿಜೆಪಿಗೆ ಈಚೆಗೆ ವಿದಾಯ ಹೇಳಿರುವ ಬೇಳೂರು ಗೋಪಾಲಕೃಷ್ಣ ಅವರನ್ನು ಯಾವ ಪಕ್ಷಗಳೂ ಈಗ ಹತ್ತಿರಕ್ಕೆ ಕರೆಯುತ್ತಿಲ್ಲ. ಸಾಗರದ ಕೆಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಕೂಡ ಹಲವು ಪಕ್ಷಗಳಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡವರು. ಜೆಡಿಎಸ್‌ನಿಂದ ಆರಂಭಿಸಿದ ಅವರ ರಾಜಕೀಯ ಯಾತ್ರೆ ಬಿಜೆಪಿಗೆ ಹೋಗಿ, ಈಗ ಕೆಜೆಪಿಗೆ ಬಂದು ನಿಂತಿದೆ.

ತೀರ್ಥಹಳ್ಳಿಯ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ, ಹಾಲಿ ಶಾಸಕ ಕಿಮ್ಮನೆ ರತ್ನಾಕರ ಜೆಡಿಎಸ್‌ನಿಂದ ಬಂದವರು. ಇದೇ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ, ಎಲ್ಲಾ ಪಕ್ಷಗಳ ಮುಖ್ಯಮಂತ್ರಿಗಳ `ಕಿಚನ್ ಕ್ಯಾಬಿನೆಟ್' ನಲ್ಲಿ ಕಾಯಂ ಸ್ಥಾನ ಪಡೆದವರು. ಈಗ ಅವರು ಕೆಜೆಪಿ ಪಾಳ್ಯದ ದಂಡನಾಯಕರು.

ಭದ್ರಾವತಿಯ ಜೆಡಿಎಸ್‌ನ ಅಭ್ಯರ್ಥಿ ಎಂ.ಜೆ. ಅಪ್ಪಾಜಿ ಕಾಂಗ್ರೆಸ್ ಮೂಲದವರು. ಸೊರಬದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಕೂಡ ಪಕ್ಷಾಂತರಿ. ಅಪ್ಪನ ಜತೆ ಸಮಾಜವಾದಿ ಪಕ್ಷ ಮತ್ತು ಬಿಜೆಪಿಗೆ ಹಾರಿದ್ದ ಅವರು, ತದನಂತರ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡು, ಈಗ ಜೆಡಿಎಸ್‌ನ ತೆನೆ ಹೊತ್ತು ನಿಂತಿದ್ದಾರೆ.

ಲಾಗಾಯ್ತಿನಿಂದಲೂ ಬಿಜೆಪಿಯಲ್ಲಿ ಗೆಲುವು ಕಾಣುತ್ತಾ ಬಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ತಮ್ಮದೇ ಪಕ್ಷ ಕಟ್ಟಿ, ಅದರ ಮೂಲಕ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.