ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿಯ ರೈತರು ಗ್ರಾಮಕ್ಕೆ ಅಂಟಿಕೊಂಡಿರುವ ಕೆರೆಯಲ್ಲಿ ದ್ವೀಪ ನಿರ್ಮಿಸುವ ಮೂಲಕ ಪಕ್ಷಿ ಸಂಕುಲ ರಕ್ಷಣೆ ಮತ್ತು ವೃದ್ಧಿಗೆ ಮುಂದಾಗಿದ್ದಾರೆ. ಅವರಿಗೆ ಜಲ ಸಂವರ್ಧನಾ ಯೋಜನೆ ಸಂಘ ಒತ್ತಾಸೆ ನೀಡಿದೆ.
ಸುಮಾರು 30.80 ಹೆಕ್ಟೇರ್ ಅಚ್ಚುಕಟ್ಟು ವಿಸ್ತೀರ್ಣ ಹೊಂದಿರುವ ಕೆರೆ ದಕ್ಷಿಣ ಅರೆ ಉಷ್ಣವಲಯದಲ್ಲಿದೆ.ಸುತ್ತಲೂ ನಿಸರ್ಗದತ್ತವಾಗಿರುವ ಗುಡ್ಡಗಳಿಂದ ಆವೃತವಾಗಿರುವ ಹಚ್ಚಹಸಿರು ವಾತಾವರಣದಿಂದಾಗಿ ಕಳೆದ ಐದಾರು ವರ್ಷಗಳಿಂದ ಇಲ್ಲಿನ ಕೆರೆಯನ್ನು ಅರಸಿ ಪಕ್ಷಿಗಳು ವಲಸೆ ಬರತೊಡಗಿವೆ.
ಈಚೆಗೆ ಹೆಚ್ಚಿರುವ ಪಕ್ಷಿ ಸಂಕುಲದಿಂದಾಗಿ ಕೆರೆಗೂ ರಮಣೀಯ ಸೌಂದರ್ಯ ದಕ್ಕಿದೆ. ಹಕ್ಕಿಗಳ ದಂಡು ಸುತ್ತಲೂ ಸಾವಿರಾರು ಎಕರೆಯಲ್ಲಿ ಹಸಿರಿನ ಮೈಹೊದ್ದಿರುವ ಭತ್ತದ ಗದ್ದೆಯಲ್ಲಿ ಬೆಳೆಹಾನಿ ಕೀಟಗಳನ್ನು ಭಕ್ಷಿಸುವ ಮೂಲಕ ರೈತರಿಗೆ ಸಹಕರಿಸತೊಡಗಿವೆ. ಪರಿಣಾಮವಾಗಿ ರೈತರ ಭತ್ತದ ಇಳುವರಿಯೂ ಅಧಿಕಗೊಂಡಿದೆ.
ಇದು ಕೊಮಾರನಹಳ್ಳಿಯ ಕೆರೆ ಬಳಕೆದಾರರ ಸಂಘದ ಗಮನಕ್ಕೆ ಬಂದದ್ದೇ ತಡ ಮಾಡಲಿಲ್ಲ. ರೈತರ ಸಭೆ ಕರೆದು ಕೆರೆ ಅಭಿವೃದ್ಧಿ ಜತೆಗೆ ಪಕ್ಷಿ ಸಂಕುಲ ರಕ್ಷಣೆ ಮತ್ತು ವೃದ್ಧಿಗೊಳಿಸಲು ರೈತಸಭೆ ನಿರ್ಣಯ ಕೈಗೊಂಡಿತು. ಗ್ರಾಮದ 42 ರೈತರು ಈ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.
ಅದಕ್ಕಾಗಿ ರೈತರು ರೂ. 2.87 ಲಕ್ಷ ವಂತಿಗೆ ವಸೂಲಿ ಮಾಡುವ ಮೂಲಕ ಸುಮಾರು ರೂ. 50.70 ಲಕ್ಷ ವೆಚ್ಚದ ಕಾಮಗಾರಿ ನಡೆಸಲು ಉದ್ದೇಶಿಸಿದ್ದು, ಈಗಾಗಲೇ ದ್ವೀಪ ನಿರ್ಮಾಣ ಕಾಮಗಾರಿ ಮುಗಿಯುತ್ತಾ ಬಂದಿದೆ. ಉಳಿದಂತೆ ಪಕ್ಷಿಗಳು ನೆಲೆಸಲು ಪೂರಕ ವಾತಾವರಣ ನಿರ್ಮಾಣದ ಗಿಡ ನೆಡುವ ಕಾಮಗಾರಿ, ಮೀನು ಕೃಷಿ ಹೊಂಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆರು ತಿಂಗಳುಗಳಲ್ಲಿ ಎಲ್ಲಾ ಕಾಮಗಾರಿಗಳು ಮುಗಿದು ಕೆರೆಯಂಗಳದಲ್ಲೊಂದು ಪುಟ್ಟ ಪಕ್ಷಿಲೋಕ ತೆರೆದುಕೊಳ್ಳಲಿದೆ.
ರೂ. 12 ಲಕ್ಷ ವೆಚ್ಚದಲ್ಲಿ ಪಕ್ಷಿಗಳ ಏಕಾಂತ ಪರಿಸರಕ್ಕಾಗಿ ದ್ವೀಪ ನಿರ್ಮಾಣ, ರೂ. 1.40 ಲಕ್ಷ ವೆಚ್ಚದಲ್ಲಿ ಪರಿಸರ ನಿರ್ವಹಣಾ ಯೋಜನೆ, ರೂ. 3.56 ಲಕ್ಷ ವೆಚ್ಚದಲ್ಲಿ ಮೀನುಕೃಷಿ ಹೊಂಡ ನಿರ್ಮಾಣ... ಇತ್ಯಾದಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದಾಗಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಐ.ಡಿ. ಮೂರ್ತಿ ವಿವರಿಸುತ್ತಾರೆ.
’ಪ್ರತಿದಿನ ಸಂಜೆ ಕೆರೆ ತೀರದಲ್ಲಿ ಪಕ್ಷಿಗಳು ಬರುತ್ತವೆ. ದೇಸಿ ಹಕ್ಕಿಗಳಾದ ಬಿಳಿಕೊಕ್ಕರೆ, ಕರಿಕೊಕ್ಕರೆ, ಬೆಳ್ಳಕ್ಕಿ ಹಿಂಡು ಬಹಳ ಇದೆ. ಆಗಾಗ ಸ್ಥಳೀಯರ ಮತ್ತು ದಟ್ಟ ವಾಹನ ಸಂಚಾರ, ಕರ್ಕಶ ಹಾರನ್‌ಗಳಿಂದಾಗಿ ಈ ಪಕ್ಷಿಗಳು ಕಣ್ಮರೆಯಾಗಿದ್ದವು. ನಂತರ ಇದ್ದಕ್ಕಿದ್ದಂತೆ ಭತ್ತದಲ್ಲಿ ಬೆಳೆಹಾನಿ ಕೀಟಗಳ ಹಾವಳಿ ಕೂಡ ಹೆಚ್ಚಾಗಿತ್ತು. ಆದರೆ, ಈಗ ಮತ್ತೆ ಪಕ್ಷಿಗಳು ಕೆರೆಯಂಗಳದತ್ತ ಮುಖಮಾಡಿವೆ.
ಈಗ ಅವುಗಳನ್ನು ಶಾಶ್ವತವಾಗಿ ನೆಲೆಸುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ, ಪಕ್ಷಿಗಳ ಏಕಾಂತ ಮತ್ತು ಅವುಗಳ ವಂಶಾಭಿವೃದ್ಧಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದ್ವೀಪ ನಿರ್ಮಿಸಲಾಗುತ್ತಿದೆ. ಪಕ್ಷಿಸಂಕುಲ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ನಮಗೆ ಸಮಸ್ತ ರೈತರು ಬೆಂಬಲಿಸಿದ್ದಾರೆ’ ಎನ್ನುತ್ತಾರೆ ರೈತ ಮುಖಂಡ ಎಸ್. ಚಂದ್ರಪ್ಪ.
ಮಧ್ಯ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಗ್ರಾಮೀಣ ಜಲದೇವತೆಗಳಾಗಿರುವ ಕೆರೆಗಳು ಹೂಳುತುಂಬಿ ನಿರ್ಜೀವಗೊಂಡಿವೆ. ಅವುಗಳಿಗೆ ಪುನರ್ಜನ್ಮ ನೀಡಬೇಕಿರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಆ ದಿಸೆಯಲ್ಲಿ ಕೊಮಾರಹಳ್ಳಿಯ ರೈತರ ಕಾರ್ಯ ಎಲ್ಲರ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.