ADVERTISEMENT

ಪಕ್ಷೇತರನಾಗಿ ಸ್ಪರ್ಧೆ: ಕೃಷ್ಣಯ್ಯ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಮಾಲೂರು: `ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸದೆ ಬಿಜೆಪಿ ಮುಖಂಡರು ತಮಗೆ ಅವಮಾನ ಮಾಡಿರುವುದರಿಂದ  ಪಕ್ಷೇತರನಾರಾಗಿ ಸ್ಪರ್ಧಿಸುವೆ' ಎಂದು  ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಸೋಮವಾರ ಪ್ರಕಟಿಸಿದರು.

ಪಟ್ಟಣದ ಹೊರವಲಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಚಿಂತನ ಮಂಥನ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಅವರು ಕಣ್ಣೀರಿಟ್ಟರು.

ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಶನಿವಾರವಷ್ಟೇ ಘೋಷಿಸಿದ್ದ ಕೃಷ್ಣಯ್ಯ ಶೆಟ್ಟಿ ಅವರು ಸೋಮವಾರ ನಡೆದ ಸಭೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಕಿಡಿ ಕಾರಿದರು.  `ಪವಿತ್ರವಾದ ವಿಧಾನಸೌಧದ ಒಳಗಡೆ ನೀಲಿ ಚಿತ್ರ ವೀಕ್ಷಣೆ ಮಾಡಿದ್ದ ಶಾಸಕರಿಗೆ ಮೊದಲನೇ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ನನ್ನನ್ನು ಕೈ ಬಿಡಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಣ ನೀಡಿದೆ ಎಂಬ ಕಾರಣಕ್ಕೆ ರಾಜಕೀಯ ವೈರತ್ವದಿಂದ ನನ್ನ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ಆದರೆ ಆರೋಪ ಸಾಬೀತಾಗಿಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ವರಿಷ್ಠರು ಟಿಕೆಟ್ ನೀಡಲು ಹಿಂದೇಟು ಹಾಕುತ್ತಿರುವುದರಿಂದ ನೋವಾಗಿದೆ' ಎಂದರು.

ತಾಲ್ಲೂಕಿನ ವಿವಿಧ ಮೂಲೆಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ರಾಜಕಾರಣದಿಂದ ನಿವೃತ್ತಿ ಘೋಷಣೆ ವಾಪಸ್ ಪಡೆಯಬೇಕು ಎಂದು ಶಾಸಕರನ್ನು ಏಕಕಂಠದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾದ ಶಾಸಕ ಕೃಷ್ಣಯ್ಯಶೆಟ್ಟಿ ಗಳಗಳನೇ ಅಳುತ್ತಿದ್ದಂತೆಯೇ ಕಾರ್ಯಕರ್ತರು ಸಹ ಅಳಲು ಆರಂಭಿಸಿದರು.

ನಂತರ ಮಾತನಾಡಿದ ಕೃಷ್ಣಯ್ಯಶೆಟ್ಟಿ, `ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಮೂರು ದಿನಗಳ ಹಿಂದೆ ಪ್ರಕಟಿಸಿರುವೆ. ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಜನ ನನ್ನನ್ನು ಸುಳ್ಳುಗಾರ ಎಂದು ಅರ್ಥೈಸುತ್ತಾರೆ. ಬಿಜೆಪಿಗೆ ಎಲ್ಲ ಬಗೆಯ ಸೇವೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೆ ಟಿಕೆಟ್ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಹೀಗಾಗಿ ರಾಜಕೀಯ ನಿವೃತ್ತಿ ಬಯಸಿದ್ದೇನೆ.

ಯಾವುದೇ ಕಾರಣಕ್ಕೂ ತೀರ್ಮಾನವನ್ನು ವಾಪಸ್ ಪಡೆಯಲ್ಲ. ಅದಕ್ಕೆ ಕಾರ್ಯಕರ್ತರು ಸಹಕರಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.