ಸಾಗರ: ತಾಲ್ಲೂಕಿನ ಕಾರ್ಗಲ್-ಜೋಗ್ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹರೀಶ್ ಗೌಡ ಅವರಿಗೆ ಇಲ್ಲಿನ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ವಂಚನೆ, ಸುಳ್ಳು ದಾಖಲೆಗಳ ಸೃಷ್ಟಿ ಇನ್ನಿತರ ಅಪರಾಧ ಎಸಗಿದ ಸಂಬಂಧ 11 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ 5,500 ದಂಡ ವಿಧಿಸಿದೆ.
2006ನೇ ಸಾಲಿನಲ್ಲಿ ಜೋಗದ ವರ್ಕ್‌ಮನ್ ಬ್ಲಾಕ್‌ನ ಸರ್ಕಾರಿ ಜಾಗವೊಂದರಲ್ಲಿ ಹರೀಶ್‌ಗೌಡ ಅಕ್ರಮವಾಗಿ ಮನೆ ನಿರ್ಮಿಸಿದ್ದರು. ಈ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವ ಸಂಬಂಧ ಏಳೆಂಟು ವರ್ಷಗಳ ಹಿಂದೆಯೇ ಮನೆ ನಿರ್ಮಿಸಲಾಗಿದೆ ಎಂದು ಪಟ್ಟಣ ಪಂಚಾಯ್ತಿಯಿಂದ ನಿರಾಕ್ಷೇಪಣಾ ಪತ್ರವನ್ನು ನಕಲಿಯಾಗಿ ಸೃಷ್ಟಿಸಿದ್ದರು. ಈ ಪತ್ರಕ್ಕೆ ಪಟ್ಟಣ ಪಂಚಾಯ್ತಿಯ ನಕಲಿ ಮೊಹರು ಹಾಗೂ ಸಹಿ ಬಳಸಿಕೊಂಡಿದ್ದರು ಎಂಬ ಆರೋಪ ಅವರ ಮೇಲಿತ್ತು.
ಈ ಸಂಬಂಧ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಚರ್ಚೆಯಾಗಿ ಹಿಂದಿನ ಅಧ್ಯಕ್ಷೆಯಾಗಿದ್ದ ಮಾಲತಿ ಪ್ರಕರಣದ ತನಿಖೆ ಮಾಡುವಂತೆ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ್‌ಕುಮಾರ್ ಅವರಿಗೆ ಸೂಚಿಸಿದ್ದರು.
ಪ್ರಕರಣದ ಕುರಿತು ದಾಖಲೆಗಳನ್ನು ಸಂಗ್ರಹಿಸಿದ ಸಂತೋಷ್‌ಕುಮಾರ್, ಹರೀಶ್‌ಗೌಡ ವಿರುದ್ಧ ಇಲ್ಲಿನ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ನಂತರ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಜೋಗ್ ಪೊಲೀಸ್ ಠಾಣೆಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹರೀಶ್‌ಗೌಡ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಹರೀಶ್‌ಗೌಡ ಅವರಿಗೆ ಶಿಕ್ಷೆ ವಿಧಿಸಿದ್ದಾರೆ. ಶಿಕ್ಷೆಯಿಂದ ವಿನಾಯ್ತಿ ನೀಡಬೇಕು ಎಂಬ ಹರೀಶ್‌ಗೌಡ ಪರ ವಕೀಲರ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಲಿಲ್ಲ.
ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ವಂಚನೆ ಹಾಗೂ ದಾಖಲೆಗಳ ಸುಳ್ಳು ಸ್ಪಷ್ಟನೆಯಂತಹ ಗಂಭೀರ ಅಪರಾಧ ಎಸಗಿರುವುದರಿಂದ ಶಿಕ್ಷೆಯಿಂದ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿ, ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದರು.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಎಂ. ಸುರೇಶ್‌ಕುಮಾರ್ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.