ADVERTISEMENT

ಪತ್ರಕರ್ತರ ನಿಯೋಗದಿಂದ ಸಿಎಂ ಭೇಟಿ

ನವೀನ್ ಸೂರಿಂಜೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಬೆಂಗಳೂರು: ಮಂಗಳೂರಿನ ಪಡೀಲ್‌ನಲ್ಲಿ ನಡೆದ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತರಾಗಿರುವ ಪತ್ರಕರ್ತ ನವೀನ್ ಸೂರಿಂಜೆಗೆ ಅನ್ಯಾಯ ಆಗಿದ್ದರೆ ಪರಿಹಾರ ಒದಗಿಸುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪತ್ರಕರ್ತರ ನಿಯೋಗಕ್ಕೆ ಮಂಗಳವಾರ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶೆಟ್ಟರ್ ಅವರನ್ನು ಭೇಟಿ ಮಾಡಿದ ಪತ್ರಕರ್ತರ ನಿಯೋಗ, ನವೀನ್ ಸೂರಿಂಜೆ ವಿರುದ್ಧ ಪೊಲೀಸರು ದ್ವೇಷದಿಂದ ಮೊಕದ್ದಮೆ ದಾಖಲಿಸಿದ್ದು, ತಪ್ಪು ಮಾಡದಿದ್ದರೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಕ್ಷಣವೇ ಸರ್ಕಾರ ಮಧ್ಯ ಪ್ರವೇಶಿಸಿ ಸೂರಿಂಜೆ ಅವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಜಾಮೀನು ಕೋರಿ ನವೀನ್ ಸಲ್ಲಿಸಿರುವ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬಾರದು. ನವೀನ್ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನೂ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನೂ ನಿಯೋಗ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಿತು.

ದಿ ಹಿಂದು ಪತ್ರಿಕೆಯ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್, ಪ್ರಜಾವಾಣಿ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು, ಎನ್‌ಡಿಟಿವಿ ಹಿರಿಯ ವರದಿಗಾರ್ತಿ ಮಾಯಾ ಶರ್ಮಾ, ಡೆಕ್ಕನ್ ಕ್ರಾನಿಕಲ್ ಬೆಂಗಳೂರು ಆವೃತ್ತಿ ಸಂಪಾದಕಿ ನೀನಾ ಗೋಪಾಲ್, ಇಂಡಿಯನ್ ಎಕ್ಸ್‌ಪ್ರೆಸ್ ಬೆಂಗಳೂರು ಆವೃತ್ತಿ ಸಂಪಾದಕ ಕೃಷ್ಣ, ದಿ ಟೈಮ್ಸ ಆಫ್ ಇಂಡಿಯಾ ರಾಜಕೀಯ ಸಂಪಾದಕಿ ನಹೀದಾ,  ಟಿವಿ9 ಹಿರಿಯ ವರದಿಗಾರ ಲಕ್ಷ್ಮಣ್ ಹೂಗಾರ್ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.