ADVERTISEMENT

ಪದಕ ಕಣ್ಮರೆ: ಮನು ಬಳಿಗಾರ್‌, ಕಾ.ತ. ಚಿಕ್ಕಣ್ಣ ಭಾಗಿ

ಲೋಕಾಯುಕ್ತ ಪೊಲೀಸರಿಂದ ಕೋರ್ಟ್‌ಗೆ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 20:08 IST
Last Updated 22 ಮಾರ್ಚ್ 2014, 20:08 IST

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ­ಯಲ್ಲಿ ನಡೆದಿರುವ ಚಿನ್ನದ ಪದಕಗಳ ಕಣ್ಮರೆ ಹಾಗೂ ಪದಕಗಳಿಗೆ ಕಳಪೆ ಗುಣಮಟ್ಟದ ಚಿನ್ನ ಬಳಕೆ ಪ್ರಕರ­ಣದಲ್ಲಿ ಇಲಾಖೆ ನಿವೃತ್ತ ಆಯುಕ್ತ ಮನು ಬಳಿಗಾರ, ನಿವೃತ್ತ ಜಂಟಿ ನಿರ್ದೇಶಕ ಕಾ.ತ.­ಚಿಕ್ಕಣ್ಣ, ವ್ಯವಸ್ಥಾಪಕ ಎಸ್‌.ಐ.ಬಾವಿಕಟ್ಟಿ ಮತ್ತು ಪ್ರಥಮ ದರ್ಜೆ ಸಹಾಯಕ ಶಿವಪ್ರಕಾಶ್ ಭಾಗಿ­ಯಾ­ಗಿದ್ದಾರೆ ಎಂದು ಲೋಕಾಯುಕ್ತ ಪೊಲೀ­ಸರು ನ್ಯಾಯಾ­ಲಯಕ್ಕೆ ವರದಿ ಸಲ್ಲಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನೀಡಲು ತಂದಿದ್ದ ಐದು ಚಿನ್ನದ ಪದಕಗಳು ಕಣ್ಮರೆ ಆಗಿರು­ವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಎಂಟು ಪದಕಗಳಿಗೆ ಕಳಪೆ ಗುಣಮ­ಟ್ಟದ ಚಿನ್ನ ಬಳಸಿರುವ ಅಂಶವೂ ತನಿಖೆಯಲ್ಲಿ ಬಯ­­ಲಿಗೆ ಬಂದಿದೆ. ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ತನಿಖಾ ವರದಿ ಸಲ್ಲಿಸಲಾಗಿದೆ. ಈಗಾಗಲೇ ಸೇವೆಯಿಂದ ನಿವೃತ್ತರಾಗಿರುವ ಮನು ಬಳಿಗಾರ ಮತ್ತು ಚಿಕ್ಕಣ್ಣ ವಿರುದ್ಧ ನೇರವಾಗಿ ವಿಚಾರಣೆ ಆರಂಭಿಸುವಂತೆ ಆರೋಪಪಟ್ಟಿಯನ್ನೇ ಸಲ್ಲಿಸಲಾಗಿದೆ. ಸೇವೆಯ­ಲ್ಲಿ­ರುವ ಬಾವಿಕಟ್ಟಿ ಮತ್ತು ಶಿವಪ್ರಕಾಶ್‌ ವಿರುದ್ಧ ವಿಚಾರಣೆ ಆರಂಭಿಸಲು ಸರ್ಕಾರದ ಅನುಮತಿ ಕೋರಿದ್ದು, ಅನುಮತಿ ದೊರೆತ ಬಳಿಕ ವಿಚಾರಣೆ ಆರಂ­ಭಿಸಬೇಕು ಎಂದು ಮನವಿ ಮಾಡಲಾಗಿದೆ.

ಇಲಾಖೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ 2013ರ ಜೂನ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರು, ನಿರ್ದೇಶಕರು ಸೇರಿದಂತೆ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀ­ಸರು ಶೋಧ ನಡೆಸಿದ್ದರು. ಹಣಕಾಸು ಅವ್ಯ­ವ­ಹಾರ ಮತ್ತು ಚಿನ್ನದ ಪದಕಗಳ ಕಣ್ಮರೆಗೆ ಸಂಬಂಧಿಸಿದಂತೆ ಶೋಧ ನಡೆಸಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ ಪಡೆಯದೇ ಇರುವ­ವ­ರಿಗೆ ಸಂಬಂಧಿಸಿದ ಚಿನ್ನದ ಪದಕ, ಪ್ರಶಸ್ತಿ ಫಲಕ ಮತ್ತಿತರ ವಸ್ತುಗಳನ್ನು ಇಲಾಖೆಯಲ್ಲೇ ಇರಿಸಿಕೊ­ಳ್ಳ­ಲಾಗುತ್ತದೆ. ಈ ರೀತಿ 25 ಪದಕಗಳು ಇಲಾಖೆ ಬಳಿ ಇರಬೇಕಾಗಿತ್ತು. ಆದರೆ, ಶೋಧ ಕಾರ್ಯದ ವೇಳೆ ಎರಡು ಪದಕಗಳು ಮಾತ್ರ ಇಲಾಖೆಯ ಕಚೇರಿಗಳಲ್ಲಿ ಪತ್ತೆಯಾಗಿದ್ದವು.

‘ತನಿಖೆ ತೀವ್ರಗೊಳ್ಳುತ್ತಿದ್ದಂತೆ 18 ಪದಕಗಳನ್ನು ಇಲಾಖೆ ಅಧಿಕಾರಿಗಳೇ ಲೋಕಾಯುಕ್ತ ಪೊಲೀಸ­ರಿಗೆ ಹಾಜರುಪಡಿಸಿದರು. ಈ ಪದಕಗಳು ಬೇರೊಂದು ಕಚೇರಿಯಲ್ಲಿ ಪತ್ತೆಯಾಗಿವೆ ಎಂಬ ಸಮ­ಜಾಯಿಷಿ ನೀಡಿದ್ದರು. ಐದು ಪದಕಗಳು ಕೊನೆಗೂ ಪತ್ತೆಯಾಗಲೇ ಇಲ್ಲ. ಪದಕಗಳ ಕಣ್ಮರೆಗೆ ಬಳಿಗಾರ್, ಚಿಕ್ಕಣ್ಣ, ಬಾವಿಕಟ್ಟಿ ಮತ್ತು ಶಿವಪ್ರಕಾಶ್ ಅವರ ಕರ್ತವ್ಯಲೋಪವೇ ಕಾರಣ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಅವರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡ­ಲಾಗಿದೆ’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಕಳಪೆ ಚಿನ್ನ: ಪದಕಗಳಲ್ಲಿ 22 ಕ್ಯಾರೆಟ್‌ ಚಿನ್ನ ಬಳಕೆ ಮಾಡಬೇಕು. ಪದಕಗಳ ಖರೀದಿ ಸಂದರ್ಭ­ದಲ್ಲಿ ಅದೇ ಗುಣಮಟ್ಟದ ಚಿನ್ನದ ದರವನ್ನು ನೀಡಲಾಗಿದೆ. ಆದರೆ, ಇಲಾಖೆಯ ಬಳಿ ದೊರೆತ ಬಹುತೇಕ ಪದಕಗಳಲ್ಲಿ ಕಳಪೆ ಗುಣಮಟ್ಟದ ಚಿನ್ನ ಬಳಕೆ ಮಾಡಿರುವುದು ಪತ್ತೆಯಾಗಿದೆ. ‘ಈ ಪದಕಗ­ಳನ್ನು ಪರೀಕ್ಷಿಸಲಾಗಿದೆ. ಅವುಗಳಲ್ಲಿ ಶೇಕಡ 72ರಷ್ಟು ಚಿನ್ನ ಮಾತ್ರ ಇದೆ. ಚಿನ್ನದ ಪದಕಗಳ ಖರೀದಿಯಲ್ಲೂ ಸರ್ಕಾರಕ್ಕೆ ವಂಚಿಸಿರು­ವುದು ಇದರಿಂದ ಖಚಿತವಾಗಿದೆ’ ಎಂದು ಮೂಲಗಳು ಹೇಳಿವೆ.

ಮುಂದುವರಿದ ತನಿಖೆ: ಇಲಾಖೆಯಲ್ಲಿನ ಹಣ­ಕಾಸು ಅವ್ಯವಹಾರ ಮತ್ತು ಚಿನ್ನದ ಪದಕಗಳ ಕಣ್ಮರೆ ಕುರಿತು ಒಟ್ಟಿಗೆ ತನಿಖೆ ಆರಂಭಿಸಲಾಗಿತ್ತು. ಈಗ ಚಿನ್ನದ ಪದಕಗಳ ಕಣ್ಮರೆಗೆ ಸಂಬಂಧಿಸಿದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್‌.ಕೆ.ಸುಧೀಂದ್ರ ರಾವ್‌ ಅವರಿಗೆ ವರದಿ ಸಲ್ಲಿಸಲಾಗಿದೆ. ಹಣಕಾಸು ಅವ್ಯವಹಾರದ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.