ಸಂದರ್ಶನ:
ಬೆಂಗಳೂರು: `ಕಾಲೇಜುಗಳಲ್ಲಿ ಪದವಿಗೆ ಸೇರ್ಪಡೆಯಾದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲೇ ಉತ್ತೀರ್ಣರಾಗುತ್ತಾರೆ. ಈಗ ಪದವಿ ಪಡೆಯುವುದು ಎಟಿಎಂನಿಂದ ಹಣ ತೆಗೆದಷ್ಟು ಸುಲಭವಾಗಿದೆ.
ದುರಂತವೆಂದರೆ ಅವರಿಗೆ ವಿಷಯದ ಸಾಮಾನ್ಯ ಜ್ಞಾನ ಇರುವುದಿಲ್ಲ~ ಎಂದು ಇತಿಹಾಸ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಚ್‌ಆರ್) ನ ಸದಸ್ಯ, ಪ್ರಸಿದ್ಧ ಇತಿಹಾಸತಜ್ಞ ಪ್ರೊ. ಬಿ. ಸುರೇಂದ್ರ ರಾವ್ ಬೇಸರ ವ್ಯಕ್ತಪಡಿಸಿದರು.
ಐಸಿಎಚ್‌ಆರ್‌ನ ಪ್ರಾದೇಶಿಕ ಕೇಂದ್ರದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆರಂಭಗೊಂಡ `ಸಂಶೋಧನಾ ಕಾರ್ಯವಿಧಾನ ಮತ್ತು ಚರಿತ್ರೆಶಾಸ್ತ್ರ~ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಲು ಆಗಮಿಸಿದ ಅವರು `ಪ್ರಜಾವಾಣಿ~ ಜೊತೆ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದ ಡೀನ್ ಆಗಿ ನಿವೃತ್ತರಾದ ಅವರು ಆರಕ್ಕೂ ಅಧಿಕ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದಿದ್ದಾರೆ. ರಾಜ್ಯದ ಪ್ರಮುಖ ಇತಿಹಾಸ ತಜ್ಞರಲ್ಲಿ ಒಬ್ಬರಾಗಿರುವ ಅವರ ಸಂದರ್ಶನದ ಭಾಗ ಇಲ್ಲಿದೆ...
-ಪಿಎಚ್.ಡಿಗಳ ಗುಣಮಟ್ಟ ಕುಸಿತಕ್ಕೆ ಕಾರಣ ಏನು?
20 ವರ್ಷಗಳ ಹಿಂದೆ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದವರು ಒಬ್ಬರು ಅಥವಾ ಇಬ್ಬರು. ಈಗ ಶೇ 75 ಮಂದಿ ಪ್ರಥಮದರ್ಜೆಯಲ್ಲೇ ಉತ್ತೀರ್ಣರಾಗುತ್ತಾರೆ. ಅನುತ್ತೀರ್ಣರಾಗುವವರು ಯಾರೂ ಇಲ್ಲ. ಕಾಲೇಜಿಗೆ ಸೇರ್ಪಡೆಯಾಗುವಾಗಲೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಿರುತ್ತದೆ. -ಬಿ. ಸುರೇಂದ್ರ ರಾವ್ |
ಕೆಲವು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿ ಪಡೆಯುವವರ ಸಂಖ್ಯೆ ಬೆರಳೆಣಿಕೆ ಇತ್ತು. ಅದೊಂದು ಶ್ರೇಷ್ಠ ಸಾಧನೆ ಎಂಬ ಭಾವನೆ ಇತ್ತು. ಸಂಶೋಧನೆ ನಿರಂತರ ಕಲಿಕೆಯ ಪ್ರಕ್ರಿಯೆಯಾಗಿತ್ತು. ಆದರೆ ಈಗ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ. ಪಿಎಚ್.ಡಿಗಳ ಬಗ್ಗೆ ನಿತ್ಯ ವಿವಾದ ಸೃಷ್ಟಿಯಾಗುತ್ತಿದೆ. ಪಿಎಚ್.ಡಿ ಸಲ್ಲಿಕೆಯಾಗುವ ಪ್ರೌಢಪ್ರಬಂಧಗಳಲ್ಲಿ ಹೆಚ್ಚಿನ ಪ್ರಬಂಧಗಳು ಕಳಪೆ ಗುಣಮಟ್ಟದವು.
-ಪಿಎಚ್.ಡಿ ನಡೆಸುವ ಮುನ್ನ ಕಡ್ಡಾಯವಾಗಿ ಕೋರ್ಸ್ ವರ್ಕ್ ಮಾಡಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿಸಿದೆ. ಗುಣಮಟ್ಟ ಸುಧಾರಣೆಗೆ ಈ ಮಾರ್ಗಸೂಚಿ ನೆರವಾಗಲಿದೆಯೇ?
`ಯುಜಿಸಿಯ ಆಶಯ ಉತ್ತಮವಾದುದು. ದಿಲ್ಲಿಯ ವಿವಿಗಳು, ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯ, ಕೇಂದ್ರೀಯ ವಿವಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಮಾರ್ಗಸೂಚಿ ಹೊರಡಿಸಿರುವುದು ಸರಿಯಲ್ಲ. ಅಲ್ಲಿ ಪ್ರತಿ ವಿಭಾಗಕ್ಕೆ 15ಕ್ಕೂ ಅಧಿಕ ಪ್ರಾಧ್ಯಾಪಕರು ಇರುತ್ತಾರೆ. ಆದರೆ ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರತಿಯೊಂದು ವಿಭಾಗಗಳಲ್ಲಿ ಇರುವುದು 3-4 ಮಂದಿ ಪ್ರಾಧ್ಯಾಪಕರು ಮಾತ್ರ. ಅವರಿಗೆ ಕೆಲಸದ ಒತ್ತಡ ಜಾಸ್ತಿ ಇರುತ್ತದೆ. ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತದೆ.
ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವವರು ಅತಿಥಿ ಉಪನ್ಯಾಸಕ ಹುದ್ದೆಗೆ ಆಸಕ್ತಿ ತೋರುವುದಿಲ್ಲ. ಒಂದೆರಡು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿ ಮುಗಿಸಿದ ಮಂದಿಯೇ ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳುತ್ತಾರೆ. ಕೋರ್ಸ್ ವರ್ಕ್ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ತರಗತಿ ನಡೆಸಿದರೆ ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗುತ್ತದೆ. ಸ್ನಾತಕೋತ್ತರ ತರಗತಿಗೆ ಪಾಠ ಮಾಡುವಾಗ ವಿಷಯ ಪ್ರಾವೀಣ್ಯ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟ ಸುಧಾರಣೆಯನ್ನು ನಿರೀಕ್ಷಿಸುವುದು ಅಸಾಧ್ಯ.
-ವರ್ಷದಿಂದ ವರ್ಷಕ್ಕೆ ಕಾಲೇಜುಗಳ ಫಲಿತಾಂಶದಲ್ಲಿ ಸುಧಾರಣೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಗುಣಮಟ್ಟದಲ್ಲೂ ಸುಧಾರಣೆಯಾಗಬೇಕಿತ್ತಲ್ಲವೇ?
20 ವರ್ಷಗಳ ಹಿಂದೆ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದವರು ಒಬ್ಬರು ಅಥವಾ ಇಬ್ಬರು. ಈಗ ಶೇ 75 ಮಂದಿ ಪ್ರಥಮದರ್ಜೆಯಲ್ಲೇ ಉತ್ತೀರ್ಣರಾಗುತ್ತಾರೆ. ಅನುತ್ತೀರ್ಣರಾಗುವವರು ಯಾರೂ ಇಲ್ಲ. ಕಾಲೇಜಿಗೆ ಸೇರ್ಪಡೆಯಾಗುವಾಗಲೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಿರುತ್ತದೆ. ಅಂಕ ನೀಡಲು ಮೌಲ್ಯಮಾಪಕರ ಮೇಲೆ ಒತ್ತಡ ಹೇರಲಾಗುತ್ತದೆ.
ಇದರಿಂದಾಗಿ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದೂರಶಿಕ್ಷಣದ ಸ್ಥಿತಿ ಇನ್ನಷ್ಟು ದಯನೀಯ. ಶಿಕ್ಷಣದಿಂದ ದೂರ ಇರುವವರಿಗೆ ಶಿಕ್ಷಣ ಸಿಗಬೇಕು ಎಂಬುದು ದೂರ ಶಿಕ್ಷಣದ ಆಶಯ. ಈಗ ತದ್ವಿರುದ್ಧ ಪರಿಸ್ಥಿತಿ ಇದೆ. `ಪದವಿ~ಗಳ ಆಕಾಂಕ್ಷೆಯಿಂದ ದೂರಶಿಕ್ಷಣ ಪದವಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. 300-400 ವಿದ್ಯಾರ್ಥಿಗಳಿಗೆವರ್ಷಕ್ಕೊಮ್ಮೆ 15 ದಿನಗಳ ತರಬೇತಿ ನೀಡಲಾಗುತ್ತದೆ. ದೂರಶಿಕ್ಷಣ ಈಗ ನಾಟಕವಾಗಿ ಬಿಟ್ಟಿದೆ.
-ಶಿಕ್ಷಣದ ವ್ಯವಸ್ಥೆ ಸುಧಾರಣೆ ಹೇಗೆ?
ಗುಣಮಟ್ಟ ಕುಸಿತಕ್ಕೆ ಒಂದು ವರ್ಗವನ್ನು ದೂರಿ ಪ್ರಯೋಜನ ಇಲ್ಲ. ಕಾಲೇಜಿಗೆ ಸೇರಿಸಿದ ಕೂಡಲೇ ಪೋಷಕರ ಜವಾಬ್ದಾರಿ ಪೂರ್ಣಗೊಂಡಂತೆ ಆಗುವುದಿಲ್ಲ. ಕಾಲೇಜಿನ ಜತೆ ಪೋಷಕರು ನಿರಂತರ ಸಂಪರ್ಕದಲ್ಲಿರಬೇಕು. ವ್ಯವಸ್ಥೆ ಸುಧಾರಣೆಗೆ ಸರ್ಕಾರ, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು, ಪೋಷಕರು ಸುಧಾರಣೆಗೆ ಕೈಜೋಡಿಸಬೇಕು.
-ಶಿಕ್ಷಣ ಮಾಧ್ಯಮದ ವಿವಾದದ ಕುರಿತು ನಿಮ್ಮ ಪ್ರತಿಕ್ರಿಯೆ ಏನು?
ಸರ್ಕಾರ ಮೊದಲು ಕನ್ನಡ ಶಾಲೆಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸಬೇಕು. ಕನ್ನಡಿಗರಿಂದಲೇ ಕನ್ನಡಕ್ಕೆ ದುರವಸ್ಥೆ ಬಂದಿದೆ. ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ಅಲ್ಲಿ ಇಂಗ್ಲಿಷ್ ಭಾಷೆಯನ್ನು ಗಂಭೀರವಾಗಿ ಕಲಿಸಬೇಕು. ಈಗ ಕನ್ನಡ ಮಾಧ್ಯಮ ಶಿಕ್ಷಣ ಎಂದರೆ ಅಲ್ಲಿ ಇಂಗ್ಲಿಷ್ ಶಿಕ್ಷಣ ಇಲ್ಲ ಎಂಬ ಭಾವನೆ ಇದೆ. ಈಗಿನ ವಿದ್ಯಾರ್ಥಿಗಳು ಯಾವ ಭಾಷೆಯನ್ನು ಸರಿಯಾಗಿ ಕಲಿಯುತ್ತಿಲ್ಲ. ಪ್ರತಿಷ್ಠಿತ ಶಾಲೆಗಳ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೇವರಿಗೆ ಪ್ರೀತಿ. ಹೆಚ್ಚು ಹೆಚ್ಚು ಭಾಷೆ ಅರಿವು ಇರುವುದು ಉತ್ತಮ. ಆದರೆ ಭಾಷಾ ಮಾಧ್ಯಮವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ರೊಚ್ಚಿಗೇಳುವುದು ಸರಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.