ADVERTISEMENT

‘ಪದಾಧಿಕಾರಿಗಳ ನೇಮಕಕ್ಕೆ ಅಪಸ್ವರ ಇಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 20:33 IST
Last Updated 15 ಜುಲೈ 2017, 20:33 IST
‘ಪದಾಧಿಕಾರಿಗಳ ನೇಮಕಕ್ಕೆ ಅಪಸ್ವರ ಇಲ್ಲ: ಪರಮೇಶ್ವರ
‘ಪದಾಧಿಕಾರಿಗಳ ನೇಮಕಕ್ಕೆ ಅಪಸ್ವರ ಇಲ್ಲ: ಪರಮೇಶ್ವರ   

ಬೆಂಗಳೂರು: ‘ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)ಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಈ ವಿಷಯದಲ್ಲಿ ಭಿನ್ನಮತ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪದಾಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನಗೊಂಡಿರುವ  ಕೆಲವು ಶಾಸಕರು, ಮುಖಂಡರು  ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂಬ ವದಿಯನ್ನು ತಳ್ಳಿ ಹಾಕಿದರು.

‘ಎಲ್ಲ ವಿಭಾಗ, ಸಮುದಾಯಗಳಿಗೆ ಅವಕಾಶ ನೀಡಲಾಗಿದೆ. ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗಿದೆ. ಹೊಸ ಪದಾಧಿಕಾರಿಗಳ ನೇಮಕದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಸಂಸದ ಕೆ.ಎಚ್. ಮುನಿಯಪ್ಪ ಅಪಸ್ವರ ಎತ್ತಿದ್ದಾರೆ ಎಂಬುದೂ ಸುಳ್ಳು. ಅವರ ಮಾತಿಗೂ ಆದ್ಯತೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಅಸಮಾಧಾನಗೊಂಡವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡುವ ಬಗ್ಗೆ ನನಗೇನೂ ಗೊತ್ತಿಲ್ಲ. ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ಸಿಗದ ಮುಖಂಡರಿಗೆ ಪಕ್ಷ ಬೇರೆ ಹೊಣೆಗಾರಿಕೆ ನೀಡಲಿದೆ’ ಎಂದರು.

ಕೇರಳ ಮಾದರಿ ಇಲ್ಲ: ‘ಚುನಾವಣೆಯಲ್ಲಿ ಕೇರಳ ಮಾದರಿ ಅನುಸರಿಸಲು ಕಾಂಗ್ರೆಸ್ ಮುಂದಾಗಿದೆ ಎಂಬುವುದೂ ಸರಿಯಲ್ಲ’ ಎಂದರು.
‘ಬಿಜೆಪಿ ಮತ್ತು ಮುಸ್ಲಿಂ ಸಂಘಟನೆಗಳ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಎಲ್ಲವನ್ನೂ ಕಾನೂನು ವ್ಯಾಪ್ತಿಗೆ ಬಿಟ್ಟರೆ ಗಲಭೆಗಳು ನಿಲ್ಲುತ್ತವೆ’ ಎಂದರು.

‘ರಾಜ್ಯದ ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರು ಕೆಲವು ರಾಜಕೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಆ ಪಕ್ಷದ ಪರವಾಗಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿದ್ಯಾರ್ಥಿ ಘಟಕ ದೂರಿದಾಗ ಈ ಕುರಿತು ಕಾನೂನಿನಂತೆ ಕ್ರಮ ಕೈಗೊಳ್ಳಿ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೂಚನೆ ನೀಡಿರುವುದು ನಿಜ. ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿಲ್ಲ. ಈ ಆರೋಪ ಸುಳ್ಳು’ ಎಂದರು.

‘ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿ ಪಕ್ಷದ ವತಿಯಿಂದ ಸರ್ವೆ ನಡೆಸಿದ್ದೇವೆ. ಸರ್ವೆಮಾತ್ರದಿಂದ ಟಿಕೆಟ್ ನೀಡುವುದಿಲ್ಲ. ಬೇರೆ ಬೇರೆ ಮಾನದಂಡಗಳನ್ನೂ ಪರಿಗಣಿಸಲಾಗುವುದು’ ಎಂದೂ ಅವರು ಹೇಳಿದರು.

‘ಅಂಬೇಡ್ಕರ್‌ ಸ್ಮರಣಾರ್ಥ ಇದೇ 21 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸುವರು. ಆ24 ರಂದು ರಾಯಚೂರಿನಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲೂ ಪಾಲ್ಗೊಳ್ಳುವರು’ ಎಂದರು.

‘ಶೋಭಾ ದಲಿತ ವರನ ಕೈಹಿಡಿಯಲಿ’
‘ನನಗೆ ಮತ್ತು ಪಕ್ಷದ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಮದುವೆ ಆಗಿದೆ. ಈಗ ಅವಕಾಶ ಇರೋದು ಶೋಭಾ ಕರಂದ್ಲಾಜೆಗೆ ಅವರಿಗೆ ಮಾತ್ರ. ಅವರು ದಲಿತ ವರನನ್ನು ನೋಡಿ ಮದುವೆ ಆಗಲಿ’ ಎಂದು ಪರಮೇಶ್ವರ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.