ADVERTISEMENT

ಪಬ್‌ ದಾಳಿ ಪ್ರಕರಣ: ವರದಿ ಕೇಳಿದ ಪೊಲೀಸ್‌ ಕಮಿಷನರ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST

ಮಂಗಳೂರು: 2009ರ ಜನವರಿಯಲ್ಲಿ ನಡೆದಿದ್ದ ಪಬ್‌ ದಾಳಿ ಪ್ರಕರಣದ ಆರೋಪಿಗಳು ಖುಲಾಸೆಯಾಗಲು ಕಾರಣವಾದ ಅಂಶಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ರಾಜ್ಯ ಪ್ರಾಸಿಕ್ಯೂಷನ್‌ ಇಲಾಖೆಯನ್ನು ಕೋರಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಆರೋಪಿಗಳು ಖುಲಾಸೆಯಾಗುವ ಎಲ್ಲ ಪ್ರಕರಣಗಳಲ್ಲೂ ಪ್ರಾಸಿಕ್ಯೂಷನ್‌ ಇಲಾಖೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆದರೆ, ಈ ಪ್ರಕರಣದಲ್ಲಿ ತ್ವರಿತವಾಗಿ ವರದಿ ನೀಡುವಂತೆ ನಾನು ಪತ್ರ ಬರೆದಿದ್ದೇನೆ’ ಎಂದರು.

ದೋಷಮುಕ್ತಗೊಳ್ಳಲು ಕಾರಣವಾದ ಅಂಶಗಳು, ತನಿಖೆಯಲ್ಲಿನ ಲೋಪದ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಪ್ರಾಸಿಕ್ಯೂಷನ್‌ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ತನಿಖಾಧಿಕಾರಿಗಳಿಂದ ಲೋಪ ಆಗಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಕುರಿತು ಪ್ರಾಸಿಕ್ಯೂಷನ್‌ ಇಲಾಖೆಯೇ ತೀರ್ಮಾನ ಕೈಗೊಳ್ಳಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.