ADVERTISEMENT

ಪರಮೇಶ್ವರ್ ನಿವಾಸಕ್ಕೆ ಲಿಂಗಾಯತ ಮಠಾಧೀಶರ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಬೆಂಗಳೂರು: ವಿರಕ್ತಮಠದ ಶಿವಾನಂದ ಸ್ವಾಮೀಜಿ, ಮಹಂತ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ 25 ಮಂದಿ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ ಭಾನುವಾರ ಮಾತುಕತೆ ನಡೆಸಿದರು.

ಮಠಾಧೀಶರನ್ನು ಸ್ವಾಗತಿಸಿದ ಪರಮೇಶ್ವರ್, ಅವರ ಪಾದಪೂಜೆ ನೆರವೇರಿಸಿದರು.ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್  ಹಾಜರಿದ್ದರು. `ಎಲ್ಲ ಸಮಾಜಗಳನ್ನು ಸಮಾನ ದೃಷ್ಟಿಯಲ್ಲಿ ನೋಡಿಕೊಂಡು ಬಂದಿದ್ದೇವೆ, ನಿಮ್ಮ ಆಶೀರ್ವಾದವೂ ನಮಗೆ ಬೇಕು~ ಎಂದು ಪರಮೇಶ್ವರ್ ಅವರು ಮಠಾಧೀಶರ ಬಳಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಹುಬ್ಬಳ್ಳಿ - ಧಾರವಾಡ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಈ ಮಠಾಧೀಶರ ಬಳಿ ಪಕ್ಷದ ಅಧ್ಯಕ್ಷರ ನಿವಾಸಕ್ಕೆ ತೆರಳುವಂತೆ ಹಲವು ಬಾರಿ ಕೋರಿದ್ದರು. ಮಠಾಧೀಶರ ಆಗಮನಕ್ಕೆ ಇದೂ ಒಂದು ಕಾರಣ ಎಂದು ತಿಳಿದುಬಂದಿದೆ. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, `ಮಠಾಧೀಶರು ಇಂದು (ಭಾನುವಾರ) ಭೇಟಿ ನೀಡಿದ್ದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬೇಕಾಗಿಲ್ಲ. ಭೇಟಿ~ ಎಂದು ತಿಳಿಸಿದರು.

`ಮಠಾಧೀಶರು ಸದ್ಯದಲ್ಲೇ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾನೇ ಅವರನ್ನು ನನ್ನ ಮನೆಗೆ ಬರುವಂತೆ ಕೋರಿದ್ದೆ~ ಎಂದು ಸ್ಪಷ್ಟಪಡಿಸಿದರು.

ಮಠಾಧೀಶರು ಕೋಡಿಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ವಿದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಭಾನುವಾರದ ಭೇಟಿಯ ವೇಳೆ ಕೋಡಿಮಠದ ಸ್ವಾಮೀಜಿ ಉಪಸ್ಥಿತರಿರಲಿಲ್ಲ.

ನಿಡಸೋಸಿ ಸ್ವಾಮೀಜಿ ಮಾತನಾಡಿ, `ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಭೇಟಿ ನೀಡಿಲ್ಲ. ಧರ್ಮಪ್ರಚಾರದ ಉದ್ದೇಶದಿಂದ ಇಷ್ಟರಲ್ಲೇ ವಿದೇಶಕ್ಕೆ ತೆರಳಲಿದ್ದೇವೆ. ಈ ವಿಚಾರದ ಕುರಿತು ಮಾತುಕತೆ ನಡೆಸಿದ್ದೇವೆ, ಅಷ್ಟೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.