ADVERTISEMENT

ಪರಿಶಿಷ್ಟರ ವಿದ್ಯಾ ವಿಕಾಸಕ್ಕೆ ವಿಘ್ನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 20:07 IST
Last Updated 1 ಸೆಪ್ಟೆಂಬರ್ 2013, 20:07 IST

ಬೆಂಗಳೂರು: ರಾಜ್ಯದಲ್ಲಿ 2013-14ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ಎರಡು ತಿಂಗಳು ಕಳೆದರೂ `ವಿದ್ಯಾ ವಿಕಾಸ ಯೋಜನೆ'ಯಡಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡದ (ಎಸ್‌ಟಿ) ವಿದ್ಯಾರ್ಥಿಗಳಿಗೆ ಇನ್ನೂ ನೋಟ್ ಪುಸ್ತಕ ದೊರೆತಿಲ್ಲ. ಪುಸ್ತಕ ಪೂರೈಕೆ ಪ್ರಕ್ರಿಯೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮರು ಟೆಂಡರ್ ಕರೆದಿರುವ ಕಾರಣ ಪುಸ್ತಕಕ್ಕಾಗಿ ವಿದ್ಯಾರ್ಥಿಗಳು ಇನ್ನಷ್ಟು ಸಮಯ ಕಾಯಬೇಕಿದೆ.

ಬಡತನ, ಜಾಗೃತಿ ಕೊರತೆ ಮತ್ತಿತರ ಕಾರಣಗಳಿಂದ ಈ ಸಮುದಾಯದ ಮಕ್ಕಳು ಶಾಲೆಗೆ ಹೋಗಲು ನಿರಾಸಕ್ತಿ ವ್ಯಕ್ತಪಡಿಸುವುದೇ ಹೆಚ್ಚು. ಒಂದು ವೇಳೆ ಹೋದರೂ ಅರ್ಧದಲ್ಲೇ ಶಾಲೆ ಬಿಡುವವರ ಸಂಖ್ಯೆ ದೊಡ್ಡದು.  ರಾಜ್ಯದಲ್ಲಿ ಸರ್ವ ಶಿಕ್ಷಣ ಅಭಿಯಾನ 2012ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಶೇ 4ರಷ್ಟು ವಿದ್ಯಾರ್ಥಿಗಳು ಅರ್ಧದಲ್ಲೇ ವ್ಯಾಸಂಗ ಮೊಟಕುಗೊಳಿಸುತ್ತಿದ್ದಾರೆ. ಅದಕ್ಕಾಗೇ ಈ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಇಲಾಖೆ ಕೆಲವು ವರ್ಷಗಳ ಹಿಂದೆ `ವಿದ್ಯಾ ವಿಕಾಸ ಯೋಜನೆ' ಅನುಷ್ಠಾನಕ್ಕೆ ತಂದಿತ್ತು. ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ 4ರಿಂದ ಎಸ್ಸೆಸ್ಸೆಲ್ಸಿ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಲಾಖೆಯೇ ಉಚಿತವಾಗಿ ಪುಸ್ತಕ ವಿತರಣೆ ಮಾಡುತ್ತಿದೆ. ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಮೂರು ಪುಸ್ತಕ, 5ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗೆ ಐದು ಪುಸ್ತಕ ಹಾಗೂ 8 ರಿಂದ ಎಸ್ಸೆಸ್ಸೆಲ್ಸಿ ವರೆಗಿನ ವಿದ್ಯಾರ್ಥಿಗೆ ಆರು ಪುಸ್ತಕ ವಿತರಿಸಲಾಗುತ್ತದೆ. ಈ ವರ್ಷ ಒಟ್ಟು 11,75,209 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

57,33,750 ನೋಟ್ ಪುಸ್ತಕಗಳನ್ನು ಪೂರೈಸಬೇಕಿದೆ. ಇಲಾಖೆಯ ವಿಳಂಬಗತಿಯ ಧೋರಣೆಯಿಂದಾಗಿ ಈ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ವಿದ್ಯಾರ್ಥಿಗಳಿಗೆ 2011ರಲ್ಲಿ `ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)' ಪುಸ್ತಕ ಪೂರೈಕೆ ಮಾಡಿತ್ತು. ಎಲ್ಲ ಇಲಾಖೆಗಳು ಎಂಪಿಎಂನಿಂದಲೇ ಕಾಗದ ಉತ್ಪನ್ನಗಳನ್ನು ಖರೀದಿಸಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 2012ರಲ್ಲೂ ಪುಸ್ತಕ ಪೂರೈಕೆ ಅವಕಾಶ ತನಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಂಸ್ಥೆ ಇತ್ತು. ಆದರೆ, 2012ರಲ್ಲಿ ಪುಣೆಯ ಬಾಫ್ನಾ ಎಕ್ಸ್‌ಪೋರ್ಟ್ ಸಂಸ್ಥೆ ನೋಟ್ ಪುಸ್ತಕ ಪೂರೈಸಿತ್ತು. ಎರಡು ವರ್ಷಗಳಲ್ಲೂ ಜುಲೈ ಆರಂಭದಲ್ಲೇ ಪುಸ್ತಕ ಪೂರೈಸಲಾಗಿತ್ತು.

ಈ ಸಲ ಪುಸ್ತಕ ವಿತರಣೆಗೆ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿತು. ಈ ಪ್ರಕ್ರಿಯೆಯಲ್ಲಿ ಎಂಪಿಎಂ ಹಾಗೂ ಬಾಫ್ನಾ ಎಕ್ಸ್‌ಪೋರ್ಟ್ ಸಂಸ್ಥೆಗಳು ಭಾಗವಹಿಸಿದ್ದವು. ಏಪ್ರಿಲ್ 19ರಂದು ತಾಂತ್ರಿಕ ಬಿಡ್ ಹಾಗೂ ಜೂನ್ 3ರಂದು ಆರ್ಥಿಕ ಬಿಡ್ ತೆರೆಯಲಾಯಿತು.
ನೋಟ್ ಪುಸ್ತಕಗಳ ಉತ್ಪಾದನಾ ಸಾಮರ್ಥ್ಯ ಹಾಗೂ ಯಂತ್ರೋಪಕರಣಗಳ ಪರಿಶೀಲನೆ ನಡೆಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆರ್ಥಿಕ ಬಿಡ್‌ಗೆ ಎಂಪಿಎಂ ಅನ್ನು ಎಲ್-1 ಆಗಿ ಆಯ್ಕೆ ಮಾಡಿದರು.

ಎಂಪಿಎಂ ಪ್ರತಿ ಪುಸ್ತಕವನ್ನು 14.25 ರೂಪಾಯಿ ವೆಚ್ಚದಲ್ಲಿ ಹಾಗೂ ಬಾಫ್ನಾ ಸಂಸ್ಥೆ 15.38 ರೂಪಾಯಿ ವೆಚ್ಚದಲ್ಲಿ ವಿತರಣೆ ಮಾಡುವುದಾಗಿ ಬಿಡ್‌ನಲ್ಲಿ ಘೋಷಿಸಿದ್ದವು. ಎಂಪಿಎಂನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಬಾಫ್ನಾ ಸಂಸ್ಥೆ ತಗಾದೆ ತೆಗೆದ ಹಿನ್ನೆಲೆಯಲ್ಲಿ ಇಲಾಖೆ ಮರು ಟೆಂಡರ್ ಕರೆದಿದೆ.

`2009ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಎಲ್ಲ ಇಲಾಖೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಎಂಪಿಎಂನಿಂದಲೇ ಕಾಗದ ಹಾಗೂ ಕಾಗದ ಉತ್ಪನ್ನಗಳನ್ನು ಖರೀದಿಸಬೇಕು. ಈ ಆದೇಶ ಐದು ವರ್ಷ ಚಾಲ್ತಿಯಲ್ಲಿರುತ್ತದೆ. ಇದಕ್ಕೆ ಕರ್ನಾಟಕ ಪಾರದರ್ಶಕ ಕಾಯ್ದೆ ಅಡಿ ವಿನಾಯಿತಿ ನೀಡಲಾಗಿದೆ. ಐದು ವರ್ಷಗಳ ಕಾಲ ಪುಸ್ತಕ ಪೂರೈಕೆಯ ಜವಾಬ್ದಾರಿ ದೊರಕುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಕಳೆದ ವರ್ಷ ಇಲಾಖೆಯಿಂದ ಅನ್ಯಾಯ ಆಗಿತ್ತು. ಈ ಬಾರಿಯೂ ಅಧಿಕಾರಿಗಳು ಅನ್ಯಾಯ ಮಾಡುವ ಹಾದಿಯಲ್ಲಿದ್ದಾರೆ. 58 ಲಕ್ಷ ನೋಟ್ ಪುಸ್ತಕಗಳನ್ನು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಗಣೆ ವ್ಯವಸ್ಥೆಯನ್ನೂ ಮಾಡಲಾಗಿದೆ' ಎಂದು ಕಾರ್ಖಾನೆಯ ಅಧಿಕಾರಿಗಳು ಹೇಳುತ್ತಾರೆ.

`ಕಲಿಕೆಗೆ ದೊಡ್ಡ ಅಡ್ಡಿ'
ಇಲಾಖೆಯ ವಿಳಂಬ ಧೋರಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕೆಲವು ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ಬಿಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಅವರಿಗೆ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಅವರ ಕಲಿಕೆಗೆ ದೊಡ್ಡ ವಿಘ್ನ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ಪೂರೈಕೆ ಮಾಡುವುದು ಇಲಾಖೆಯ ಜವಾಬ್ದಾರಿ.
-ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ, ದಕ್ಷಿಣ ಕನ್ನಡ

`ವಿದ್ಯಾಭ್ಯಾಸ ಮೊಟಕು'

ಸಕಾಲದಲ್ಲಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡದ ಕಾರಣ ಬಡ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಸ್ಪಂದಿಸಿಲ್ಲ. ತಡವಾಗಿ ನೋಟ್ ಪುಸ್ತಕ ವಿತರಿಸಿದರೆ ವಿದ್ಯಾರ್ಥಿಗಳಿಗೆ ಲಾಭ ಆಗುವುದಿಲ್ಲ. ಕಲಿಕೆಯಲ್ಲಿ ಹಿಂದೆ ಉಳಿಯುತ್ತಾರೆ' 
-ಶಂಕರ ಕೊರಗ, ಕೊರಗ ಸಮುದಾಯದ ಮುಖಂಡ

`ಸಮಸ್ಯೆ ಬಗೆಹರಿಸಲು ಕ್ರಮ'

`ಎಂಪಿಎಂ ಬಗ್ಗೆ ಬಾಫ್ನಾ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮರು ಟೆಂಡರ್ ಕರೆಯಲಾಗಿದೆ. ಮೇಲ್ವಿಚಾರಣಾ ಪ್ರಾಧಿಕಾರವಾಗಿರುವ ಇಲಾಖೆಯ ಕಾರ್ಯದರ್ಶಿ ಅವರು ಈ ಬಗ್ಗೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು'
-ಮೊಹಮದ್ ಮೊಹಿಸಿನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.