ADVERTISEMENT

...ಪಶ್ಚಾತ್ತಾಪದ ಕಾಲ ದೂರವಿಲ್ಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 19:30 IST
Last Updated 8 ನವೆಂಬರ್ 2011, 19:30 IST
...ಪಶ್ಚಾತ್ತಾಪದ ಕಾಲ ದೂರವಿಲ್ಲ
...ಪಶ್ಚಾತ್ತಾಪದ ಕಾಲ ದೂರವಿಲ್ಲ   

ಬೆಂಗಳೂರು: `ನನ್ನನ್ನು ಜೈಲಿಗೆ ಕಳುಹಿಸಿ ಸಂತೋಷಪಟ್ಟವರು ಪಶ್ಚಾತ್ತಾಪ ಪಡುವ ಕಾಲ ದೂರ ಇಲ್ಲ~-
ಹೀಗೆ ಹೇಳಿದ್ದು ಬಿ.ಎಸ್. ಯಡಿಯೂರಪ್ಪ.ಜೈಲಿನಿಂದ ಬಿಡುಗಡೆಯಾದ ನಂತರ ಅವರು ನೇರವಾಗಿ ಹಲಸೂರಿನ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಪೂಜೆ ಮಾಡಿಸಿದ ನಂತರ ರೇಸ್‌ಕೋರ್ಸ್ ರಸ್ತೆಯ ತಮ್ಮ ಮನೆಗೆ ತೆರಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಯಾರನ್ನೂ ಟೀಕೆ ಮಾಡುವುದಿಲ್ಲ~ ಎಂದು ಹೇಳುತ್ತಲೇ ವಿರೋಧಿಗಳಿಗೆ ತಿರುಗೇಟು ನೀಡಿದರು.

`ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿ ಇಟ್ಟುಕೊಂಡು ನಾನು ಮಾತನಾಡುವುದಿಲ್ಲ. ನನ್ನನ್ನು ಜೈಲಿಗೆ ಕಳುಹಿಸಿ ಸಂತೋಷಪಟ್ಟವರು ಪಶ್ಚಾತ್ತಾಪ ಪಡಲಿದ್ದಾರೆ. ಆ ದಿನಗಳು ಬಹಳ ದೂರ ಇಲ್ಲ~ ಎಂದರು.
ಇದೇ ಸಂದರ್ಭದಲ್ಲಿ ಹೊಸ ಪಕ್ಷ ಕಟ್ಟುವ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

`ರಾಜ್ಯದ ಆರು ಕೋಟಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿಯಾಗುತ್ತೇನೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ಗೌರವ ಇದೆ. ಆದಷ್ಟು ಬೇಗ ಆರೋಪಮುಕ್ತನಾಗುವ ವಿಶ್ವಾಸ ಇದೆ~ ಎಂದರು.

`ಅಧಿಕಾರ ಶಾಶ್ವತ ಅಲ್ಲ. ನನ್ನ ಬಿಡುಗಡೆಗೆ 24 ದಿನಗಳಿಂದ ದೇವರಲ್ಲಿ ಪ್ರಾರ್ಥಿಸಿದ ಹಾಗೂ ನನ್ನ ನೋವಿಗೆ ಸ್ಪಂದಿಸಿದ ರಾಜ್ಯದ ಎಲ್ಲ ನನ್ನ ಅಭಿಮಾನಿಗಳು, ಹಿತೈಷಿಗಳಿಗೆ ಋಣಿಯಾಗಿದ್ದೇನೆ~ ಎಂದು ನುಡಿದರು.

`ನಾನು ಯಾವುದೇ ಅಕ್ರಮ ಎಸಗಿಲ್ಲ. ಆದರೂ ಜೈಲಿನಲ್ಲೇ ಈ ಸಲದ ದೀಪಾವಳಿ ಆಚರಿಸಬೇಕಾಯಿತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರತಿ ಎತ್ತಿ ಸ್ವಾಗತ:ರೇಸ್‌ಕೋರ್ಸ್ ರಸ್ತೆಯ ಮನೆಗೆ ತೆರಳುತ್ತಿದ್ದ ಹಾಗೆಯೇ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಪುತ್ರಿಯರು ಮತ್ತು ಸೊಸೆಯಂದಿರು ಆರತಿ ಎತ್ತಿ ಯಡಿಯೂರಪ್ಪ ಅವರನ್ನು ಮನೆಗೆ ಬರಮಾಡಿಕೊಂಡರು. ಮನೆಗೆ ಹೋದವರೇ ದೇವರ ದರ್ಶನ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.