ADVERTISEMENT

ಪಶ್ಚಿಮ ಘಟ್ಟಕ್ಕೆ ವಿಶ್ವ ಪರಂಪರೆ ಮಾನ್ಯತೆ: ದುರುದ್ದೇಶ ಕಾರಣ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: ಜನಪ್ರತಿನಿಧಿಗಳ ದುರುದ್ದೇಶ, ಮರಗಳ್ಳರ ಮಾಫಿಯಾ ಮತ್ತು ಕಾಡಿನ ನಡುವೆ ತಲೆಯೆತ್ತುತ್ತಿರುವ ಅಭಿವೃದ್ಧಿ ಯೋಜನೆಗಳಲ್ಲಿ ಬಂಡವಾಳ ಹೂಡಿರುವ ಸಂಸ್ಥೆಗಳ ಲಾಬಿಯಿಂದಾಗಿ ಕರ್ನಾಟಕ ಭಾಗದ ಪಶ್ಚಿಮ ಘಟ್ಟದ ಹತ್ತು ತಾಣಗಳಿಗೆ ವಿಶ್ವ ನೈಸರ್ಗಿಕ ಪಾರಂಪರಿಕ ತಾಣವೆಂದು ಯುನೆಸ್ಕೊ ನೀಡುವ ಮಾನ್ಯತೆ ತಪ್ಪುವ ಭೀತಿ ಎದುರಾಗಿದೆ.

`ಈ ಪಟ್ಟಿಗೆ ಸೇರಿದರೆ ಪಶ್ಚಿಮ ಘಟ್ಟದಲ್ಲಿ ಯಾವುದೇ ಅಭಿವೃದ್ಧಿಗೆ ಯುನೆಸ್ಕೊ ಅನುಮತಿ ಪಡೆಯಬೇಕು. ನಮ್ಮ ಆಸ್ತಿ, ನಮ್ಮ ಜಾಗ, ಬೇರೆಯವರ ಕೈಗೆ ಏಕೆ ಜುಟ್ಟು ಕೊಡುವುದು~.

-ಇದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್, ಒಬ್ಬ ಸಂಸದ, ಕೆಲ ಶಾಸಕರು ಹಾಗೂ ಸಚಿವರ ಸಭೆಯಲ್ಲಿ ಆಡಿರುವ ಮಾತು. ಇದರ ಹಿಂದೆ ಅನೇಕ ಒತ್ತಡಗಳು ಕೆಲಸ ಮಾಡಿವೆ ಎನ್ನುವ ಅಭಿಪ್ರಾಯ ಪರಿಸರವಾದಿಗಳು ಹಾಗೂ ಅರಣ್ಯ ಇಲಾಖೆ ವಲಯದಲ್ಲಿ ಕೇಳಿಬರುತ್ತಿದೆ.

ದೇಶದ ಯಾವುದೇ ರಾಜ್ಯದಲ್ಲಿಯೂ ಯುನೆಸ್ಕೊ ಮಾನ್ಯತೆಗೆ ವಿರೋಧ ವ್ಯಕ್ತವಾಗಿಯೇ ಇಲ್ಲ. ಪಶ್ಚಿಮ ಘಟ್ಟಗಳು ಹಾದು ಹೋಗುವ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಸಹ ಯೋಜನೆಗೆ ಒಪ್ಪಿಗೆ ಸೂಚಿಸಿವೆ. ಹೆಚ್ಚಿನ ಜನಸಾಂದ್ರತೆ ಹಾಗೂ ಕಾಡಿನ ಅಂಚಿನಲ್ಲೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಿಸುತ್ತಿರುವ ಕೇರಳ ರಾಜ್ಯದಲ್ಲಿಯೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎನ್ನುವ ಮಾಹಿತಿ ದೊರಕಿದೆ. ಆದರೆ ಅಭಿವೃದ್ಧಿಪರ ರಾಜ್ಯ ಎನ್ನುವ ಹೆಗ್ಗಳಿಕೆಯ ಕರ್ನಾಟಕದಲ್ಲಿ ಅರಣ್ಯ ರಕ್ಷಣೆಗೆ ಪೂರಕವಾಗಿರುವ ಯೋಜನೆಗೆ ಯಾವ ಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.

ರಾಜಕೀಯ ಮುಖಂಡರು `ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಹಂಪಿಯಲ್ಲಿ ಸೇತುವೆ ನಿರ್ಮಿಸಲು ಕಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಕಾಡಿನಲ್ಲೂ ಉಂಟಾಗುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗದು. ಅರಣ್ಯವಾಸಿಗಳ ಪುನರ್ವಸತಿಗೆ ಅವಕಾಶವೇ ಇರುವುದಿಲ್ಲ~ ಎನ್ನುವ ಪ್ರಶ್ನೆ ಎತ್ತಿದ್ದಾರೆ.

ಇದಕ್ಕೆ ಉತ್ತರವೆಂದರೆ ಯುನೆಸ್ಕೊ, ಪಶ್ಚಿಮ ಘಟ್ಟಗಳ ಕೆಲ ಪ್ರದೇಶಗಳಿಗೆ ನೈಸರ್ಗಿಕ ಪರಂಪರೆಯ ತಾಣಗಳಿಗೆ ವಿಶ್ವ ಮಾನ್ಯತೆ ನೀಡುತ್ತಿದೆಯೇ ಹೊರತು ಯಾವುದೇ ಕಾಯ್ದೆ, ನಿಯಮವನ್ನು ಹೇರುತ್ತಿಲ್ಲ.

ಇಂತಹ ಪ್ರದೇಶದಲ್ಲಿಯೂ ಅರಣ್ಯ ಸಂರಕ್ಷಣೆಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮಾತ್ರವೇ ಜಾರಿಯಲ್ಲಿ ಇರುತ್ತದೆ.

ಪಶ್ಚಿಮ ಘಟ್ಟಗಳ ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಸಿಂಹ ಬಾಲದ ಮಂಗ ಕಾಣುತ್ತದೆ. ಇದು ಪ್ರಾದೇಶಿಕ ಸಂತತಿ ಎಂದು ಗುರುತಿಸಲಾಗಿದೆ. ಇದೇ ರೀತಿಯಲ್ಲಿ ಕಪ್ಪು ಚಿರತೆ, ಹಾರ್ನ್‌ಬಿಲ್, ಕಾಳಿಂಗ ಸರ್ಪ ಕೆಲ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿವೆ. ಅಳಿವಿನ ಅಂಚಿನಲ್ಲಿರುವ ಸಸ್ಯಗಳು ಸಹ ಕೆಲ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಇವುಗಳನ್ನು ರಕ್ಷಿಸಿ ಎಂದು ಮಾತ್ರವೇ ಯುನೆಸ್ಕೊ ಸೂಚಿಸುತ್ತಿದೆ. ಇವುಗಳ ರಕ್ಷಣೆ ಸಾಧ್ಯವಾಗದಿದ್ದರೆ ಮಾನ್ಯತೆಯನ್ನು ಯುನೆಸ್ಕೊ ಹಿಂದಕ್ಕೆ ಪಡೆಯುತ್ತದೆ. ಅಷ್ಟೆ.

ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿದರೆ, ಆ ಪ್ರದೇಶ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ ಅಭಿವೃದ್ಧಿ ಕಷ್ಟ. ಆದರೆ ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದರೂ ಸಂರಕ್ಷಣೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲೇ ಇರುತ್ತದೆ. ಹೀಗಾಗಿ ನಮ್ಮ ಜುಟ್ಟನ್ನು ಯಾರ ಕೈಗೋ ನೀಡಬೇಕಾಗುತ್ತದೆ ಎನ್ನುವ ಸಚಿವರ ಅಭಿಪ್ರಾಯದಲ್ಲಿ ಕಿಂಚಿತ್ತೂ ಹುರುಳಿಲ್ಲ.

ಯುನೆಸ್ಕೊ ಮಾನ್ಯತೆಯಿಂದ ವಿಶ್ವ ಭೂಪಟದಲ್ಲಿ ಪಶ್ಚಿಮ ಘಟ್ಟಕ್ಕೆ ಮಾನ್ಯತೆ ದೊರಕುತ್ತದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ವಿದೇಶಿ ವಿನಿಮಯ ಗಳಿಸಲು ಒಳ್ಳೆಯ ಮಾರ್ಗ ದೊರಕುತ್ತದೆ.

ಹಂಪಿಯಲ್ಲಿ ಅರೆಬರೆ ಬಟ್ಟೆ ಧರಿಸಿದ ಹಿಪ್ಪಿಗಳು ತಿರುಗುತ್ತಿದ್ದಾರೆ. ಕಾಡಿಗೂ ಇದೇ ಸ್ಥಿತಿ ಬರುತ್ತದೆ ಎನ್ನುವ ವಿತಂಡ ವಾದವನ್ನು ಮುಂದಿಡಲಾಗಿದೆ. ಈಗಾಗಲೇ ಕಾಡಿನ ಅಂಚಿನಲ್ಲಿ ಪ್ರವಾಸಿಗರ ಧಾರಣೆಯ ಶಕ್ತಿಯನ್ನು ಅಂದಾಜಿಸಿ ರೆಸಾರ್ಟ್ ನಿರ್ಮಾಣಕ್ಕೆ ಹಾಗೂ ಸಫಾರಿಗೆ ಅನುಮತಿ ನೀಡಲಾಗಿದೆ. ಈ ಕಾಡಿನಲ್ಲಿ ಪ್ರವಾಸಿಗರು ಇಷ್ಟ ಬಂದಂತೆ ಸುತ್ತಲು ಸಾಧ್ಯವೇ ಇಲ್ಲ. ಅರಣ್ಯ ಇಲಾಖೆ ಪರಿಸರ ಪ್ರವಾಸೋದ್ಯಮವನ್ನು ನಿಯಂತ್ರಿಸುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕುದುರೆಮುಖದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ.

ದೇಶದಲ್ಲಿ ಈಗಾಗಲೇ ಐದು ನೈಸರ್ಗಿಕ ಪ್ರದೇಶಗಳಿಗೆ ಯುನೆಸ್ಕೊ ಮಾನ್ಯತೆ ದೊರಕಿದೆ. ನಂದಾದೇವಿ ಪರ್ವತ ಶ್ರೇಣಿ, ನಂದಾದೇವಿ ರಾಷ್ಟ್ರೀಯ ಉದ್ಯಾನವನ, ರಾಜಸ್ತಾನದ ಕಿಯೋಳದೇವಿ ರಾಷ್ಟ್ರೀಯ ಉದ್ಯಾನ, ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಮಾನಸ ರಾಷ್ಟ್ರೀಯ ಉದ್ಯಾನ ಮತ್ತು ಪಶ್ಚಿಮ ಬಂಗಾಳದ ಸುಂದರಬನ ಈಗಾಗಲೇ ಯುನೆಸ್ಕೊ ಮಾನ್ಯತೆಯಿಂದ ಬೀಗುತ್ತಿವೆ.

ಅಲ್ಲಿಯ ಸರ್ಕಾರಗಳಿಗೆ ಮಾನ್ಯತೆಯಿಂದ ಯಾವುದೇ ತೊಂದರೆಯಾಗಿಲ್ಲ. ಅಂದಮೇಲೆ ಕರ್ನಾಟಕ ಯಾವ ರೀತಿಯಲ್ಲಿ ಭಿನ್ನ ಎನ್ನುವ ಪ್ರಶ್ನೆ ಪರಿಸರ ವಾದಿಗಳಿಂದ ಬಂದಿದೆ.

ಚೀನಾದ ಮಹಾನ್ ಗೋಡೆ ಹಾಗೂ ತಾಜ್‌ಮಹಲನ್ನು ಒಂದು ಪಾರಂಪರಿಕ ಸ್ಮಾರಕವನ್ನಾಗಿ ಗುರುತಿಸಲಾಗಿದೆ. ಆದರೆ ಗುಜರಾತ್‌ನಿಂದ ಆರಂಭವಾಗಿ ಕರ್ನಾಟಕ, ಕೇರಳ, ತಮಿಳುನಾಡು ಮೂಲಕ ಹಾದು ಹೋಗುವ ಪಶ್ಚಿಮ ಘಟ್ಟವನ್ನು ಒಂದು ತಾಣವೆಂದು ಗುರುತಿಸುವ ಬದಲು ಅನೇಕ ತಾಣಗಳನ್ನಾಗಿ ಗುರುತಿಸಲು ಪ್ರಧಾನಮಂತ್ರಿಗಳ ನೇತೃತ್ವದ ಸಭೆಯಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ.

60 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಪೈಕಿ ಕರ್ನಾಟಕದಲ್ಲಿಯೇ ಶೇ 60ಕ್ಕಿಂತಲೂ ಹೆಚ್ಚು ಪ್ರದೇಶವಿದೆ. ಇದರಲ್ಲಿ ಹತ್ತು ಪ್ರದೇಶಗಳನ್ನು ಯುನೆಸ್ಕೊ ನೈಸರ್ಗಿಕ ಪಾರಂಪರಿಕ ತಾಣವೆಂದು ಮಾನ್ಯತೆ ದೊರಕಿದರೆ, ಅರಣ್ಯ ಸಂರಕ್ಷಣೆಗೆ ಮತ್ತಷ್ಟು ಬಲ ಬರುತ್ತದೆ.

2003ರಿಂದ ಸಿದ್ದತೆ
ಪಶ್ಚಿಮ ಘಟ್ಟಗಳಿಗೆ ಯುನೆಸ್ಕೊ ಮಾನ್ಯತೆ ಪಡೆಯುವ ಸಿದ್ದತೆ 2003ರಿಂದಲೇ ಆರಂಭವಾಗಿದೆ. ಅಕ್ಟೋಬರ್ 10ರಂದು ಕೇಂದ್ರ ಪರಿಸರ ಇಲಾಖೆಯು ಯುನೆಸ್ಕೊ ಮಾನ್ಯತೆ ಪಡೆಯಲು ಕಣ್ಮರೆಯಾಗುತ್ತಿರುವ ಸಸ್ಯ, ಪ್ರಾಣಿಗಳು ಮತ್ತು ಪ್ರಾದೇಶಿಕ ಮೌಲ್ಯವಿರುವ ಕೆಲ ಪ್ರದೇಶಗಳನ್ನು ಸೂಚಿಸಿ ಎಂದು ಪತ್ರ ಬರೆದಿತ್ತು. 2003ರ ಅಕ್ಟೋಬರ್ 15ರಂದು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯ ಪಡೆ (ಟಾರ್ಸ್ಕ್ ಫೋರ್ಸ್) ರಚಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

ನಂತರ ಅರಣ್ಯ ಸಚಿವಾಲಯದ ಮಹಾನಿರ್ದೇಶಕ, ಭಾರತೀಯ ವನ್ಯಜೀವಿ ಕೇಂದ್ರದ ನಿರ್ದೇಶಕ, ಆಯಾ ರಾಜ್ಯಗಳ ಅರಣ್ಯ ಇಲಾಖೆಯ ಮುಖ್ಯಸ್ಥರು, ಜಿಇಆರ್ ಪ್ರತಿಷ್ಠಾನದ ಸದಸ್ಯ ಹಾಗೂ ವನ್ಯಜೀವಿ ಡಿಐಜಿ ಸದಸ್ಯರಾಗಿರುವ ಸಮಿತಿ ರಚಿಸಲಾಯಿತು.
(ನಾಳೆ ಮುಂದುವರಿಯುವುದು)

ಆಗ ಬೇಕು: ಈಗ ಬೇಡ 
2005ರಲ್ಲಿ ಅಂದಿನ ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರು ಯುನೆಸ್ಕೊ ಮಾನ್ಯತೆಯನ್ನು ಬೇಗ ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿದ್ದರು. ಸರ್ಕಾರಗಳು ಬದಲಾದಂತೆ ಆದ್ಯತೆಯೂ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.