ADVERTISEMENT

ಪಶ್ಚಿಮ ಘಟ್ಟ ರಕ್ಷಣೆಗೆ `ನಕ್ಸಲ್' ನೇತೃತ್ವ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಚಿಕ್ಕಮಗಳೂರು: `ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜನರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸುತ್ತೇವೆ. ಹೋರಾಟದ ಗುರಿ ಮುಟ್ಟುವವರೆಗೂ ಹೋರಾಟದ ನೇತೃತ್ವ ವಹಿಸುತ್ತೇವೆ' ಎಂದು ನಕ್ಸಲರು ಮಾಧ್ಯಮ ಕಚೇರಿಗೆ ತಲುಪಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸಿಪಿಐ (ಮಾವೋವಾದಿ) ಪಶ್ಚಿಮಘಟ್ಟ ವಿಶೇಷ ವಲಯ ಸಮಿತಿ ಮತ್ತು ಮಲೆನಾಡು-ಕರಾವಳಿ ಏರಿಯಾ ಸಮಿತಿ ಹೆಸರಿನಲ್ಲಿ ನಕ್ಸಲರು ಮಾಧ್ಯಮಗಳಿಗೆ ಕಳುಹಿಸಿರುವ 14 ಪುಟಗಳ ಮೂರು ಪತ್ರಗಳಲ್ಲಿ ಹೀಗೆ ಹೇಳಿದ್ದಾರೆ.

`ಪುಷ್ಪಗಿರಿ- ಗ್ರೇಟರ್ ತಲಕಾವೇರಿ ಇತ್ಯಾದಿ ಯೋಜನೆಗಳ ವಿರುದ್ಧ ಸಿಡಿದೆದ್ದು ಹೋರಾಡೋಣ, ಅರಣ್ಯ ಇಲಾಖೆ- ಪೊಲೀಸರ ದಮನ ಕಾರ್ಯಾಚರಣೆ ನಿಲ್ಲಿಸೋಣ' ಶೀರ್ಷಿಕೆಯಡಿ ಬರೆದಿರುವ 4 ಪುಟಗಳ ಒಂದು ಪತ್ರದಲ್ಲಿ `ನಮ್ಮ ಕಾಡು, ನಮ್ಮ ಹಕ್ಕು, ನಮ್ಮದೇ ಅಧಿಕಾರ' ಎಂದು ಗುಡುಗಿದ್ದಾರೆ. 

`ಪರಿಸರ ಸಂರಕ್ಷಣೆ, ಹುಲಿ ಸಾಕಣೆ, ಆನೆ ಕಾರಿಡಾರ್, ಜೀವ ವೈವಿಧ್ಯತೆ ಸಂರಕ್ಷಣೆ ಇತ್ಯಾದಿ ಹೆಸರಿನಲ್ಲಿ ಕುದುರೆಮುಖ, ಪುಷ್ಪಗಿರಿ, ತಲಕಾವೇರಿ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಘೋಷಿಸಿ, ನಂತರ ಇವೆಲ್ಲವನ್ನೂ ಒಟ್ಟುಗೂಡಿಸಿ ಗ್ರೇಟರ್ ತಲಕಾವೇರಿ' ಎಂಬ ಒಂದೇ ವಿಶಾಲ ಸಂರಕ್ಷಿತ ಪ್ರದೇಶ ಮಾಡುವುದು ಸರ್ಕಾರದ ಉದ್ದೇಶ. ನಂತರ ಇಲ್ಲಿಂದ ಜನರನ್ನು ಒಕ್ಕಲೆಬ್ಬಿಸುವುದು ಅಥವಾ ಜನರನ್ನು ಅಲ್ಲಿ ವಾಸಿಸಲು ಸಾಧ್ಯವಾಗದಂತೆ ಮಾಡುವುದು, ಸುತ್ತಮುತ್ತಲಿನ ಜಾಗ ನಿಯಂತ್ರಣಕ್ಕೆ ತೆಗೆದುಕೊಂಡು ವಿದೇಶಿ ಕಂಪೆನಿಗಳಿಗೆ ವಹಿಸುವುದು ಸರ್ಕಾರದ ರಹಸ್ಯ ಕಾರ್ಯಸೂಚಿ' ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

`ಸಾಮ್ರಾಜ್ಯಶಾಹಿ-ಊಳಿಗಮಾನ್ಯ ಶೋಷಣೆ, ಆಳ್ವಿಕೆ ನಿರ್ನಾಮ ಮಾಡಲು ಸಶಸ್ತ್ರ ಹಿಡಿಯೋಣ, ಜನರ ವಿಮೋಚನೆಗಾಗಿ, ಜನರ ಅಧಿಕಾರಕ್ಕಾಗಿ, ಜನರ ಪ್ರಜಾತಂತ್ರಕ್ಕಾಗಿ ಪ್ರಜಾಯುದ್ಧ ಸಾರೋಣ' ಶೀರ್ಷಿಕೆಯಡಿ 6 ಪುಟಗಳ ಇನ್ನೊಂದು ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ `ಕೇಂದ್ರ ಸರ್ಕಾರ, ಕೇರಳ, ತಮಿಳುನಾಡು, ಕರ್ನಾಟಕದ ಪ್ರಭುತ್ವಗಳ (ಸರ್ಕಾರಗಳ) ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ (ಮಾವೊವಾದಿ) ಪಶ್ಚಿಮ ಘಟ್ಟ ಸ್ಪೆಷಲ್ ಜೋನಲ್ ಕಮಿಟಿ ಕ್ರಾಂತಿಕಾರಿ ಯುದ್ಧ ಪ್ರಕಟಿಸಿದೆ' ಎಂದು ಎಚ್ಚರಿಕೆ ನೀಡಿದ್ದಾರೆ.

`ಪಶ್ಚಿಮ ಘಟ್ಟ ವ್ಯಾಪ್ತಿಯ ಮೂರು ರಾಜ್ಯಗಳ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಡಿಎಂಕೆ, ಎಡಿಎಂಕೆ, ಸಿಪಿಐ(ಎಂ), ಸಿಪಿಐ, ಮುಸ್ಲಿಂ ಲೀಗ್ ಪಕ್ಷಗಳು ಜನವಿರೋಧಿ ನೀತಿ ತಳೆದಿವೆ' ಎಂದು ಕಿಡಿಕಾರಿದ್ದಾರೆ.

`ಸರ್ಕಾರ- ಎಎನ್‌ಎಫ್ ಪಡೆಗಳ ದಮನಕಾಂಡಕ್ಕೆ ಕೊನೆಯೇ ಇಲ್ಲವೇ?' ಎಂಬ ಶೀರ್ಷಿಕೆಯಡಿ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಬುದ್ಧಿಜೀವಿಗಳನ್ನು ಉದ್ದೇಶಿಸಿ ಸವಿವರವಾಗಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.