ADVERTISEMENT

ಪಾಲಿಟೆಕ್ನಿಕ್ ಬೋಧಕರಿಗೆ ವೇತನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:05 IST
Last Updated 17 ಫೆಬ್ರುವರಿ 2011, 17:05 IST

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳ ಬೋಧಕ ಸಿಬ್ಬಂದಿಗೆ 6ನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಪರಿಷ್ಕೃತ ವೇತನ ಶ್ರೇಣಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹೊಸ ವೇತನ ಶ್ರೇಣಿ ಬರುವ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳುವ ಮೂಲಕ ಸುಮಾರು ಮೂರು ಸಾವಿರ ನೌಕರರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 71 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

81 ಸರ್ಕಾರಿ ಮತ್ತು 44 ಅನುದಾನಿತ ಪಾಲಿಟೆಕ್ನಿಕ್‌ಗಳ ಅಧ್ಯಾಪಕರಿಗೆ ಏಪ್ರಿಲ್‌ನಿಂದ ಸಂಬಳ ದ್ವಿಗುಣಗೊಳ್ಳಲಿದೆ. ಇದುವರೆಗೆ  ರೂ 8000- 13,500 ವೇತನ ಪಡೆಯುತ್ತಿದ್ದವರು ಪರಿಷ್ಕೃರಣೆ ಪ್ರಕಾರ ರೂ 15,600- 39,100 ವೇತನ ಪಡೆಯಲಿದ್ದಾರೆ. ಇದಲ್ಲದೆ ಶೈಕ್ಷಣಿಕ ವೇತನ ಶ್ರೇಣಿ ರೂಪದಲ್ಲಿ ಬಿ.ಇ ಪದವಿ ಪಡೆದವರು ಮಾಸಿಕ ರೂ 5,400 ಹಾಗೂ ಎಂ.ಇ ಆದವರು ರೂ 6000 ಪಡೆಯುತ್ತಾರೆ. ಹೀಗಾಗಿ ಸೇವೆಗೆ ಸೇರಿದ ಕೂಡಲೇ 21 ಸಾವಿರ ರೂಪಾಯಿ ಮೂಲ ವೇತನ ಸಿಗಲಿದೆ.

ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯನ್ನು ರಾಜ್ಯ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಕಾರ ಶೇ 45ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್‌ಗಳನ್ನು ಕಂಪ್ಯೂಟರೀಕರಣಗೊಳಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 23 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ.

2810 ಕಂಪ್ಯೂಟರ್, 275 ಪ್ರಿಂಟರ್ಸ್‌, 252 ಯುಪಿಎಸ್‌ಗಳನ್ನು ಖರೀದಿಸಲಾಗುತ್ತಿದ್ದು, ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 50ರಷ್ಟು ಹಣವನ್ನು ಈ ವರ್ಷ ಮತ್ತು ಇನ್ನುಳಿದ ಹಣವನ್ನು ಮುಂದಿನ ಬಜೆಟ್‌ನಲ್ಲಿ ನೀಡಲಾಗುತ್ತದೆ ಎಂದರು.

ಅಭಿನಂದನೆ: ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಕಾರಣರಾದ ಉನ್ನತ ಶಿಕ್ಷಣ ಸಚಿವ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಎಂ.ಮದನ ಗೋಪಾಲ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಶಾಸಕರಿಗೆ ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್ ನೌಕರರ ಸಂಘದ ಅಧ್ಯಕ್ಷ ಕೆ.ಜೆ.ಶಿವಶಂಕರ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ತರಣೆ: ಪ್ರಸ್ತುತ ಪ್ರಾಯೋಗಿಕವಾಗಿ ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಧಾರ್ ಯೋಜನೆಯನ್ನು ಈ ವರ್ಷದ ಅಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆಚಾರ್ಯ ತಿಳಿಸಿದರು.

ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವ ಕಾಮಗಾರಿಗಳಿಗೆ 6.3 ಕೋಟಿ ರೂಪಾಯಿ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. 38 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಗೆ ಐದು ಕೋಟಿ ರೂಪಾಯಿ ನೀಡಲಾಗುತ್ತದೆ.

ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆ ನಗರದ ಉತ್ತರಹಳ್ಳಿ ಹೋಬಳಿಯಲ್ಲಿ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಮುಂದೆ ಬಂದಿದ್ದು, ಇದಕ್ಕಾಗಿ 4.11 ಎಕರೆ ಭೂಮಿಯನ್ನು ಶೇ 50ರ ವೆಚ್ಚದಲ್ಲಿ ನೀಡಲಾಗುತ್ತದೆ.

ಬಳ್ಳಾರಿ ಜಿಲ್ಲಾಧಿಕಾರಿಗಳ ಸಂಕೀರ್ಣಕ್ಕೆ 25 ಕೋಟಿ ರೂಪಾಯಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ತಲಾ 15 ಮತ್ತು 16 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ಮೊದಲ ಹಂತದಲ್ಲಿ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತದೆ.

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು ವಿಶೇಷ ಶಾಲೆಗಳ ಅಧ್ಯಾಪಕರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಮಕ್ಕಳ ಸಂಖ್ಯೆಯನ್ನು ಆಧರಿಸಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಇದಕ್ಕಾಗಿ 20 ಕೋಟಿ ರೂಪಾಯಿ ನೀಡಲಾಗಿದ್ದು, ತಕ್ಷಣ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತದೆ ಎಂದರು.

ಅಂಗನವಾಡಿಗಳಲ್ಲಿ ಏಕತಾನತೆ ಹೋಗಲಾಡಿಸಿ ಗುಣಮಟ್ಟ ಸುಧಾರಿಸಲು 42 ವಿಷಯಗಳನ್ನು ಒಳಗೊಂಡ ಕಿಟ್ ನೀಡಲು 6.17 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಶೇ 90ರಷ್ಟನ್ನು ಕೇಂದ್ರ ಸರ್ಕಾರ ಹಾಗೂ ಉಳಿದ 10ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. 63 ಸಾವಿರ ಅಂಗನವಾಡಿಗಳಿಗೆ ಇದರಿಂದ ಅನುಕೂಲವಾಗಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಮಂದಗೆರೆ ಮತ್ತು ಹೇಮಗಿರಿ ನಾಲೆಗಳ ಆಧುನೀಕರಣ 141 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ.ಉಪ ಸಮಿತಿ: ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಜಮ್ಮಾ ಬಾಣೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುತ್ತದೆ. ಕಂದಾಯ ಮತ್ತು ಕಾನೂನು ಸಚಿವರು ಸೇರಿದಂತೆ ಇದರಲ್ಲಿ ಯಾರು ಇರಬೇಕು ಎಂಬುದನ್ನು ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದರು.

ವಿದ್ಯಾವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಮುಂದಿನ ವರ್ಷ ಸಮವಸ್ತ್ರ ವಿತರಿಸಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಮುಂಚಿತವಾಗಿಯೇ ಒಟ್ಟು ವೆಚ್ಚದ ಶೇ 50ರಷ್ಟು ಹಣ ನೀಡಲು ಹಾಗೂ ಬಾಕಿ ಇರುವ 42 ಕೋಟಿ ರೂಪಾಯಿ ಪೈಕಿ 27 ಕೋಟಿ ರೂಪಾಯಿಯನ್ನು ತಕ್ಷಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.