ADVERTISEMENT

ಪಿಎಚ್‌.ಡಿಗೆ ಇಂಗ್ಲಿಷ್‌ ಕಡ್ಡಾಯ

ಹೋರಾಟಕ್ಕೆ ದೇಜಗೌ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ): ಪಿಎಚ್‌.ಡಿಗೆ ಇಂಗ್ಲಿಷ್‌ ಕಡ್ಡಾಯ ಮಾಡಿರುವ ಕ್ರಮವನ್ನು ಖಂಡಿಸಿರುವ ವಿಶ್ರಾಂತ ಕುಲಪತಿ ಪ್ರೊ.ದೇ.­ಜವರೇಗೌಡ ಅವರು, ಇದರ ವಿರುದ್ಧ ಹೋರಾಟ ನಡೆಸಬೇಕು ಎಂದು ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಇಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ಕನ್ನಡ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಪಿಎಚ್‌.ಡಿಗೆ ಇಂಗ್ಲಿಷ್‌ ಕಡ್ಡಾಯ ಮಾಡಲು ಯುಜಿಸಿ ಯಾರು?’ ಎಂದು ಪ್ರಶ್ನಿಸಿದರು.

ಕನ್ನಡದಲ್ಲಿಯೂ ಪಿಎಚ್‌.ಡಿ ಮಾಡಬಹುದು, ಆದರೂ ವಿಶ್ವವಿದ್ಯಾಲಯ ಅನು­ದಾನ ಆಯೋಗ (ಯುಜಿಸಿ) ಇಂಗ್ಲಿಷ್‌ನಲ್ಲಿಯೇ ಪಿಎಚ್‌. ಡಿ ಮಾಡಬೇಕು ಎಂಬ ನಿಯಮ ರೂಪಿಸಿದ್ದು ಸರಿಯಲ್ಲ. ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಬ್ಯಾಂಕ್‌ಗಳ ನೇಮಕಾತಿ­ಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಇಂಗ್ಲಿಷ್‌ ಭಾಷೆ ಈಗ ಹಳ್ಳಿಹಳ್ಳಿಯನ್ನೂ ತಲುಪಿದೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಕೆಲಸ ನೀಡುತ್ತೇವೆ ಎಂದು ಸರ್ಕಾರ ಹೇಳಬೇಕು. ಈ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳ­ಬೇಕು ಎಂದು ಅವರು ಆಗ್ರಹಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಮಾತನಾಡಿ ಇಂಗ್ಲಿಷ್‌ನಲ್ಲಿ ಪಿಎಚ್‌.ಡಿ ಮಾಡಬೇಕು ಎಂಬುದು ಯುಜಿಸಿ ಮಾರ್ಗಸೂಚಿ. ಆದರೆ ಅದನ್ನು ಬದಲಾಯಿಸಿಕೊಳ್ಳಬಹುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿಯೇ ಪಿಎಚ್‌.ಡಿ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.