ADVERTISEMENT

ಪಿಜಿಇಟಿ ಅಕ್ರಮ: ನವೆಂಬರ್‌ನಲ್ಲಿ ವರದಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:40 IST
Last Updated 23 ಅಕ್ಟೋಬರ್ 2011, 19:40 IST

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಪಿಜಿಇಟಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಡಾ.ವಿನಾಯಕ ಪ್ರಸನ್ನ ಅವರ ಪತ್ತೆ ಕಾರ್ಯ ಮುಂದುವರೆದಿದ್ದು, ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಅಕ್ರಮವಾಗಿ ರ‌್ಯಾಂಕ್ ಪಡೆದಿರುವ ಅಭ್ಯರ್ಥಿಗಳಲ್ಲಿ ಹಿರಿಯ ವಕೀಲರೊಬ್ಬರ ಪುತ್ರನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸುದ್ದಿಗಾರರು ಸಿಐಡಿ ಡಿಜಿಪಿ ಶಂಕರ ಬಿದರಿ ಅವರನ್ನು ಪ್ರಶ್ನಿಸಿದಾಗ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಅಕ್ರಮ ಹೇಗೆ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಆಕಾಂಕ್ಷಿಗಳನ್ನು ಸಂಪರ್ಕಿಸಿದ್ದ ವಿನಾಯಕ, ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ರ‌್ಯಾಂಕ್ ಗಳಿಸಲು ನೆರವು ನೀಡುವುದಾಗಿ ಹೇಳಿ ಹಣ ಪಡೆದಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಆರ್‌ಜಿಯುಎಚ್‌ಎಸ್‌ನ ಅಧಿಕಾರಿಗಳು ಮತ್ತು ವಿಮ್ಸ ಸಿಬ್ಬಂದಿ ನೆರವಿನಿಂದ ಆತ, ಹಣ ನೀಡಿದ 11 ಅಭ್ಯರ್ಥಿಗಳೂ ವಿಮ್ಸ ಪರೀಕ್ಷಾ ಕೇಂದ್ರದ ಒಂದೇ ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಹಾಗೂ ಆ ಅಭ್ಯರ್ಥಿಗಳಿಗೆಲ್ಲ ಒಂದೇ ಸರಣಿಯ ಪ್ರಶ್ನೆಪತ್ರಿಕೆಗಳು ಸಿಗುವಂತೆ ವ್ಯವಸ್ಥೆ ಮಾಡಿದ್ದ. ಅಲ್ಲದೇ ಆತನೇ ಆ ಕೊಠಡಿಯ ಮೇಲ್ವಿಚಾರಕನಾಗಿದ್ದ.

2011ರ ಜನವರಿ 30ರಂದು ಪರೀಕ್ಷೆ ಆರಂಭವಾಗುವುದಕ್ಕೂ ಒಂದು ಗಂಟೆ ಮುಂಚಿತವಾಗಿ ಆತ ಪ್ರಶ್ನೆಪತ್ರಿಕೆಗಳ ಲಕೋಟೆ ತೆರೆದು ಡಿಜಿಟಲ್ ಕ್ಯಾಮೆರಾದಿಂದ ಅದರ ಛಾಯಾಚಿತ್ರಗಳನ್ನು ತೆಗೆದಿದ್ದ. ನಂತರ ಆ ಕ್ಯಾಮೆರಾವನ್ನು ಅಭ್ಯರ್ಥಿಯೊಬ್ಬನ ಮನೆಗೆ ಕಳುಹಿಸಿಕೊಟ್ಟಿದ್ದ.

ಇದಕ್ಕೂ ಮುನ್ನ ಆತ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ವಿಷಯ ಪರಿಣತರನ್ನು ಅಭ್ಯರ್ಥಿಯ ಮನೆಯಲ್ಲಿ ಇರಿಸಿದ್ದ. ಕ್ಯಾಮೆರಾ ಅಭ್ಯರ್ಥಿಯ ಮನೆಗೆ ತಲುಪುತ್ತಿದ್ದಂತೆ ವಿಷಯ ಪರಿಣತರು ಅದರ ಮೆಮೊರಿ ಕಾರ್ಡ್ ಹೊರ ತೆಗೆದು ಕಂಪ್ಯೂಟರ್‌ಗೆ ಹಾಕಿ ಪ್ರಶ್ನೆಪತ್ರಿಕೆಯ ಛಾಯಾಚಿತ್ರಗಳ ಪ್ರಿಂಟ್ ತೆಗೆದುಕೊಂಡಿದ್ದರು. ಬಳಿಕ ಅವರು ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿದ್ದರು.

ಆ ಉತ್ತರಗಳನ್ನು 4/6 ಅಳತೆಯ ಹಾಳೆಯಲ್ಲಿ ಬರೆದು ಅದರ ಜೆರಾಕ್ಸ್ ಪ್ರತಿಗಳನ್ನು 11.30ರ ಸುಮಾರಿಗೆ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು. ಪರೀಕ್ಷಾ ಕೇಂದ್ರದಲ್ಲಿದ್ದ ವಿನಾಯಕ ಜೆರಾಕ್ಸ್ ಪ್ರತಿಗಳನ್ನು ಅಭ್ಯರ್ಥಿಗಳಿಗೆ ಕೊಟ್ಟಿದ್ದ. ಆ ಅಭ್ಯರ್ಥಿಗಳು ಹಿಂದೆಯೂ ಪಿಜಿಇಟಿ ಪರೀಕ್ಷೆ ಬರೆದಿದ್ದರು. ಆದರೆ ಉನ್ನತ ಶ್ರೇಣಿಯ ರ‌್ಯಾಂಕ್ ಪಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದೂರು ಕೊಟ್ಟಿದ್ದ ಇತರೆ ಅಭ್ಯರ್ಥಿಗಳು: ವಿಮ್ಸನಲ್ಲೇ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಪರೀಕ್ಷೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆರ್‌ಜಿಯುಎಚ್‌ಎಸ್‌ನ ರಿಜಿಸ್ಟ್ರಾರ್‌ಗೆ ಮತ್ತು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಹಿಂದಿನ ಲೋಕಾಯುಕ್ತರು ತನಿಖಾ ಸಮಿತಿ ರಚಿಸಿದ್ದರು. ಆ ಸಮಿತಿ ಸದಸ್ಯರು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ವರದಿ ನೀಡಿದ್ದರು.

ಇದೇ ಸಂದರ್ಭದಲ್ಲಿ ಆರ್‌ಜಿಯುಎಚ್‌ಎಸ್‌ನ ರಿಜಿಸ್ಟ್ರಾರ್ ಅವರು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪರೀಕ್ಷಾ ಅಕ್ರಮದ ಸಂಬಂಧ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಕೌಲ್‌ಬಜಾರ್ ಪೊಲೀಸರು ದೂರಿನಲ್ಲಿ ಹುರುಳಿಲ್ಲ. ಆದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಿ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಲೋಕಾಯುಕ್ತ ತನಿಖಾ ಸಮಿತಿಯ ವರದಿ ಹಿನ್ನೆಲೆಯಲ್ಲಿ ಆರ್‌ಜಿಯುಎಚ್‌ಎಸ್ ಆ 11 ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ಗೆ ಹಾಜರಾಗಲು ಅವಕಾಶ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಅವಕಾಶ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು.

ಬಿದರಿ, ಐಜಿಪಿ ಎನ್.ಎಸ್.ಮೇಘರಿಖ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಚಲಪತಿ, ಕೈಸರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.