ADVERTISEMENT

ಪಿಡಿಒ ಆತ್ಮಹತ್ಯೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಗುಲ್ಬರ್ಗ: ಗ್ರಾಮ ಪಂಚಾಯಿತಿ ರಾಜಕೀಯದ ಕಿರುಕುಳದಿಂದ ಬೇಸತ್ತ ಸಣ್ಣೂರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಂದಾಕಿನಿ (23) ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಆರು ಗಂಟೆಗಳ ಒಳಗೆ ಆರೋಪಿಗಳಾದ ಸಣ್ಣೂರ ಗ್ರಾಮದ ಮುಖಂಡ ಜಗದೀಶ್ ಪಾಟೀಲ್, ಗ್ರಾಮ ಪಂಚಾಯಿತಿ ಕರ ಸಂಗ್ರಹಕಾರ ವಾಸುದೇವ ಜಾಧವ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಹಕ್ಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: ನಗರದ ಬಿ. ಶ್ಯಾಮಸುಂದರ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಮಂದಾಕಿನಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಬೌದ್ಧ ದಮ್ಮದ ಕಾರ್ಯಕ್ರಮಕ್ಕೆ ತಾಯಿ ಹಾಗೂ ಮನೆಯವರು ಹೋದಾಗ ಈ ಘಟನೆ ನಡೆದಿದೆ.  ಕಾನೂನುಬಾಹಿರ ಕಾರ್ಯಕ್ಕೆ ಒತ್ತಾಯಿಸಿ ಜಗದೀಶ್ ಪಾಟೀಲ್, ವಾಸುದೇವ ಜಾಧವ ಹಾಗೂ ಬಸವರಾಜ ಹಕ್ಕಿ ನೀಡಿದ ಕಿರುಕುಳದಿಂದ ಬೇಸತ್ತ ಮಂದಾಕಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಛಾಯಾ ಶಂಕರ ಯಕಲೂರ ರಾಘವೇಂದ್ರ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವ್ಯವಹಾರ ಆರೋಪದ ಮೇಲೆ ಕರ ಸಂಗ್ರಹಕಾರ ವಾಸುದೇವ ಜಾಧವನನ್ನು ಈಚೆಗೆ ಗ್ರಾಮ ಪಂಚಾಯಿತಿಯು ಗೊತ್ತುವಳಿ ಮಂಡಿಸಿ ಸೇವೆಯಿಂದ ಅಮಾನತುಗೊಳಿಸಿತ್ತು. ಆದರೆ ಆತ ಹಾಗೂ ಉಳಿದಿಬ್ಬರು ಸೇರಿಕೊಂಡು ಅಮಾನತು ಆದೇಶ ರದ್ದುಪಡಿಸುವಂತೆ ಒತ್ತಡ ಹೇರುತ್ತಿದ್ದರು. ಇದಕ್ಕಾಗಿ ಮಾಜಿ ಜಿ.ಪಂ. ಸದಸ್ಯರು, ರಾಜಕೀಯ ಮುಖಂಡರ ಪತ್ರ, ಒತ್ತಡಗಳನ್ನು ತರುತ್ತಿದ್ದರು. ಮಂದಾಕಿನಿ ಮೇಲೆ ಅವ್ಯವಹಾರದ ಆರೋಪ ಹೊರಿಸಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಕೆಲವು ಬೋಗಸ್ ಬಿಲ್‌ಗೆ ಸಹಿ ಮಾಡಲು ಒತ್ತಾಯಿಸಿ   ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಸಂಬಂಧಿ ಸೂರ್ಯಕಾಂತ ನಿಂಬಾಳ್ಕರ್ ತಿಳಿಸಿದ್ದಾರೆ.

ADVERTISEMENT

ಭೇಟಿ:  ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುರ್ ಪವಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ವಿಜಯಕುಮಾರ್ ಮೃತಳ ಮನೆಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.