ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸಿಐಡಿ ಪೊಲೀಸರು ಎಲ್ಲ ಕಡೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿಐಡಿ ಡಿಜಿಪಿ ಆರ್.ಕೆ.ದತ್ತ ಅವರು ಶನಿವಾರ ಪ್ರಕರಣ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಕೆಲವೊಂದು ವಿವರಗಳನ್ನು ಪಡೆದುಕೊಂಡರು.
ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ವಾಮಮಾರ್ಗದ ಮೂಲಕ ಹಣ ಮಾಡುವ ಮತ್ತು ಪರೀಕ್ಷಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಉದ್ದೇಶದಿಂದ ದುಷ್ಟಶಕ್ತಿಗಳು ಈ ರೀತಿಯ ಕೆಲಸ ಮಾಡಿದ್ದು, ಇಲಾಖೆಯ ಕೆಲ ಸಿಬ್ಬಂದಿ ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಇದರ ಹಿಂದೆ ಕಾಣದ ವ್ಯಕ್ತಿಗಳ ಕೈವಾಡವಿದ್ದು, ಕೆಲ ವರ್ಷಗಳಿಂದ ಅವರು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೇವಲ ಪಿಯುಸಿ ಪ್ರಶ್ನೆಪತ್ರಿಕೆಗಳು ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಹ ಬಹಿರಂಗ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಿಕ್ಕಿಹಾಕಿಕೊಂಡಾಗ ಅವರನ್ನು ಬಂಧಿಸಿದರೂ, ಒತ್ತಡ ತಂದು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಾರೆ. ಆ ಗುಂಪಿನವರೇ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಹಿರಂಗ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿ ಮಾರಾಟವಾಗಿವೆ. ಆದರೆ ಮೊದಲು ಬೆಂಗಳೂರಿನಲ್ಲಿ ಬಹಿರಂಗವಾಗಿದ್ದು, ಇಲ್ಲಿಂದಲೇ ಬೇರೆ ಬೇರೆ ಕಡೆಗಳಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖಜಾನೆಯಿಂದ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಅಥವಾ ಮುದ್ರಣಾಲಯದಿಂದ ಬಹಿರಂಗವಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಕೈವಾಡ: ಆಯುಕ್ತರಾದ ವಿ.ರಶ್ಮಿ ಅವರು ಇಲಾಖೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ತರುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಮಾನ್ಯತೆ ನವೀಕರಣ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವುದು, ಅರೆಕಾಲಿಕ ಉಪನ್ಯಾಸಕರ ವೇತನ ಬಿಡುಗಡೆ ಸೇರಿದಂತೆ ಎಲ್ಲವನ್ನೂ ಕಾನೂನುಬದ್ಧವಾಗಿಯೇ ಮಾಡುತ್ತಿದ್ದರು. ಅವ್ಯವಹಾರಕ್ಕೆ ಆಸ್ಪದ ನೀಡುತ್ತಿರಲಿಲ್ಲ, ಸುಳ್ಳು ಅಂಕಿಸಂಖ್ಯೆಗಳನ್ನು ನೀಡಿ ಇಲಾಖೆಯನ್ನು ದಿಕ್ಕುತಪ್ಪಿಸಲು ಖಾಸಗಿ ಸಂಸ್ಥೆಗಳಿಗೆ ಆಸ್ಪದ ಇರಲಿಲ್ಲ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಆಡಳಿತ ಮಂಡಳಿಗಳು ಕಾಣದ ಕೈಗಳೊಂದಿಗೆ ಷಾಮೀಲಾಗಿ ಈ ರೀತಿಯ ಕೆಲಸ ಮಾಡಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನೋಟಿಸ್ ಪಡೆದಿರುವ ಕಾಲೇಜಿನವರು ಬಹಿರಂಗಗೊಂಡಿರುವ ಪ್ರಶ್ನೆಪತ್ರಿಕೆಗಳನ್ನು ಹಣಕ್ಕೆ ಖರೀದಿ ಮಾಡಿದ್ದಾರೆ. ಬೆಂಗಳೂರಿನಿಂದಲೇ ಎಲ್ಲ ಕಡೆಗೆ ಪ್ರಶ್ನೆಪತ್ರಿಕೆಗಳು ಹೋಗಿದ್ದು, ಇಲಾಖೆಯ ಕೆಲ ಅಧಿಕಾರಿಗಳು ಕೈಜೋಡಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಗೂಂಡಾ ಕಾಯ್ದೆಯಡಿ ಬಂಧಿಸಿ: ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಈಗಿರುವ ಕಾಯ್ದೆ ಪ್ರಕಾರ ಅವರಿಗೆ ಎರಡು ಸಾವಿರ ರೂಪಾಯಿ ದಂಡ, ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ಸುಲಭವಾಗಿ ಜಾಮೀನು ಸಿಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರೆ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.