ADVERTISEMENT

ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು: ಸಿಐಡಿ ತನಿಖೆ, 14 ಉಪನ್ಯಾಸಕರ ಸಸ್ಪೆಂಡ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ  ಪ್ರಶ್ನೆಪತ್ರಿಕೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ಸರ್ಕಾರಿ ಕಾಲೇಜುಗಳ 14 ಉಪನ್ಯಾಸಕರನ್ನು ಅಮಾನತುಗೊಳಿಸಿದೆ.

 

ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ಹಿಂದೆ ವ್ಯವಸ್ಥಿತ ಜಾಲ ಇರುವ ಸಂಶಯದ ಹಿನ್ನೆಲೆಯಲ್ಲಿ ಗುರುವಾರ ಸಿಐಡಿ ತನಿಖೆ ಆರಂಭವಾಗಿದ್ದು, ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸೋಮವಾರ ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಂತಾಮಣಿಯ ಮೂರು ಮತ್ತು ಚಿಕ್ಕಬಳ್ಳಾಪುರದ ಒಂದು ಖಾಸಗಿ ಪದವಿ ಪೂರ್ವ ಕಾಲೇಜಿಗೆ ಮಾನ್ಯತೆ ರದ್ದುಪಡಿಸುವ ಸಂಬಂಧ ಷೋಕಾಸ್ ನೋಟಿಸ್ ನೀಡಲಾಗಿದೆ.

ಘಟನೆ ಸಂಬಂಧ ಚಿಂತಾಮಣಿಯಲ್ಲಿ ಪ್ರದೀಪ್ ಮತ್ತು ವೆಂಕಟೇಶ್ ಎಂಬುವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಈಶ್ವರ್ ನಾಪತ್ತೆಯಾಗಿದ್ದಾನೆ. ಪ್ರದೀಪ್ ಜೆರಾಕ್ಸ್ ಅಂಗಡಿ ಮಾಲೀಕ. ವೆಂಕಟೇಶ್ ತಂಗಿ ಪಿಯುಸಿ ಓದುತ್ತಿದ್ದು, ಆಕೆಗೆ ಪ್ರಶ್ನೆಪತ್ರಿಕೆ ಪಡೆಯಲು ವೆಂಕಟೇಶ್ ಜೆರಾಕ್ಸ್ ಅಂಗಡಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಇದಲ್ಲದೆ ಅಶ್ವತ್ಥ ನಾರಾಯಣ, ರಂಜಿತ್ ಹಾಗೂ ಸುದರ್ಶನ ಎಂಬುವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಗುರುವಾರ ನಗರದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡಿದ್ದು, ಪ್ರತಿ ಪ್ರಶ್ನೆ ಪತ್ರಿಕೆಯನ್ನು 40 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ತರೀಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿ ಕುಡ್ಲೂರು ಪ್ರಾಥಮಿಕ ಶಾಲೆ ಶಿಕ್ಷಕ ಸಿದ್ರಾಮಪ್ಪ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

 ಚಿಂತಾಮಣಿಯ ವೆಂಕಟಾದ್ರಿ, ರಾಯಲ್, ಪ್ರಗತಿ ಪದವಿ ಪೂರ್ವ ಕಾಲೇಜು ಮತ್ತು ಚಿಕ್ಕಬಳ್ಳಾಪುರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿಗೆ ನೋಟಿಸ್ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಮಕೂರು, ಶ್ರೀನಿವಾಸಪುರ, ಬೆಂಗಳೂರಿನ ಯಲಹಂಕ ನ್ಯೂಟೌನ್, ನಾಗರಬಾವಿ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಭೌತ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಆ ವಿಷಯದ ಪರೀಕ್ಷೆಯನ್ನು ಇಲಾಖೆ ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಬೆನ್ನಲ್ಲೇ ಭೌತವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯೂ ಬಹಿರಂಗವಾಗಿರುವುದರಿಂದ ಪೋಷಕರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು ಮತ್ತು ಪರೀಕ್ಷೆ ಮುಂದೂಡಿರುವುದನ್ನು ಖಂಡಿಸಿ ಗುರುವಾರ ಹಲವೆಡೆ ಪ್ರತಿಭಟನೆಗಳು ನಡೆದಿವೆ.


ಹಿಂದಿನ ವರ್ಷಗಳ ಹಾಗೆ ಈ ವರ್ಷವೂ ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಷ್ಟಾದರೂ ಪ್ರಶ್ನೆಪತ್ರಿಕೆಗಳು ಹೇಗೆ ಬಹಿರಂಗವಾದವು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆಯ ನಂತರವೇ ಸ್ಪಷ್ಟ ಉತ್ತರ ದೊರೆಯಲು ಸಾಧ್ಯ ಎಂದು ಅವರು ಉತ್ತರಿಸಿದರು.

ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ವೆಂಕಟಾದ್ರಿ ಕಾಲೇಜಿಗೆ ಗುರುವಾರ ತಂಡವೊಂದನ್ನು ಕಳುಹಿಸಲಾಗಿತ್ತು. ತಂಡದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕಾಲೇಜುಗಳ ಉಪನ್ಯಾಸಕರು, ಖಾಸಗಿ ಕಾಲೇಜುಗಳಲ್ಲಿ ಪಾಠ ಮಾಡುತ್ತಿರುವುದಲ್ಲದೆ, ಪ್ರಶ್ನೆಪತ್ರಿಕೆ ಬಹಿರಂಗವಾಗಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ ನಂತರವೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.

ತನಿಖೆ ಆರಂಭ:ಸರ್ಕಾರದ ಸೂಚನೆಯಂತೆ ಗುರುವಾರ ಸಿಐಡಿ ತನಿಖೆ ಆರಂಭವಾಗಿದೆ.  ಒಟ್ಟು ಐದು ತಂಡಗಳನ್ನು ರಚಿಸಲಾಗಿದ್ದು, ಸಂಶಯದ ಮೇಲೆ ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೋಮವಾರದ ಒಳಗೆ ಸುಳಿವು ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
 
ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಗುರುವಾರ ಬೆಳಿಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಆಯುಕ್ತರಾದ ವಿ.ರಶ್ಮಿ ಅವರೊಂದಿಗೆ  ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು, ಮುಂದೆ ಈ ರೀತಿ ಆಗುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕಾಡುತ್ತಿರುವ ಪ್ರಶ್ನೆ: ಪ್ರಶ್ನೆಪತ್ರಿಕೆಗಳು ಮುದ್ರಣವಾಗುವ ಸ್ಥಳದಲ್ಲಿ ಅಥವಾ ಖಜಾನೆಯಲ್ಲಿ ಮಾತ್ರ ಬಹಿರಂಗವಾಗಲು ಸಾಧ್ಯ. ಯಾವ ಕಡೆಯಿಂದ ಬಹಿರಂಗವಾಯಿತು ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳಾದ ಪುಟ್ಟರಾಜು, ನವೀನ್ ಕುಮಾರ್, ಅಜಯ್ ಕುಮಾರ್ ಮತ್ತು ಶಶಿಕಲಾ ತಲೆಮರೆಸಿಕೊಂಡಿದ್ದಾರೆ. ಗಿರಿನಗರ ಹಾಗೂ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT