ಬೆಂಗಳೂರು (ಪಿಟಿಐ): ಶುಕ್ರವಾರ ಮಾಧ್ಯಮದವರನ್ನು ಮನಬಂದಂತೆ ಥಳಿಸಿದ ಪುಂಡ ವಕೀಲರ ವಿರುದ್ಧ ನಡೆಸಲುದ್ದೇಶಿಸಿರುವ ನ್ಯಾಯಾಂಗ ತನಿಖೆಗೆ ಪತ್ರಕರ್ತ ಸಮೂಹ ಶನಿವಾರ ಭಾರಿ ವಿರೋಧ ವ್ಯಕ್ತಪಡಿಸಿದೆ.
ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಮಾಧ್ಯಮದ ಪ್ರಮುಖರು ನ್ಯಾಯಾಂಗ ತನಿಖೆಯು ಬರೇ ಕಣ್ಣೊರೆಸುವ ತಂತ್ರವಾಗಿದೆ ಎಂದು ಹೇಳಿದರು.
ಎಲ್ಲವೂ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಣ್ಣೆದುರೇ ಸಾಕ್ಷಿಗಳಿವೆ. ಇಂತಹ ಸಮಯದಲ್ಲಿ ಹಲ್ಲೆ ನಡೆಸಿದ ಪುಂಡ ವಕೀಲರನ್ನು ತಕ್ಷಣವೇ ಬಂಧಿಸುವುದನ್ನು ಬಿಟ್ಟು ನ್ಯಾಯಾಂಗ ತನಿಖೆ ಎಂದು ಕಾಲಹರಣ ಮಾಡುತ್ತಿರುವುದು ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದನ್ನು ತೋರಿಸುತ್ತದೆ ಎಂದು ಅವರು ಆಪಾದಿಸಿದರು.
ತಕ್ಷಣವೇ ಹಲ್ಲೆ ನಡೆಸಿದ ಪುಂಡ ವಕೀಲರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬಂಧಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಮಾಧ್ಯಮ ಪ್ರತಿನಿಧಿಗಳು ಆಗ್ರಹಿಸಿದರು.
ಈ ಮಧ್ಯೆ ಬೆಂಗಳೂರು ವರದಿಗಾರರ ಕೂಟ ಹಾಗೂ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಿ ರಾಜ್ಯಪಾಲರನ್ನು ಭೇಟಿ ಮಾಡಿ ತಕ್ಷಣವೇ ಪುಂಡ ವಕೀಲರನ್ನು ಬಂಧಿಸಬೇಕೆಂದು ಆಗ್ರಹಿಸಿದವು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.