ADVERTISEMENT

ಪೆಟ್ರೋಲ್: ತೆರಿಗೆ ಕಡಿತ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಬೆಂಗಳೂರು:  ಬೇರೆ ಯಾವ ರಾಜ್ಯದಲ್ಲೂ ಇಲ್ಲದ ಶೇ 5ರಷ್ಟು ಪ್ರವೇಶ ತೆರಿಗೆಯನ್ನು ಕರ್ನಾಟಕದಲ್ಲಿ ಮಾತ್ರ ವಿಧಿಸಲಾಗುತ್ತಿರುವುದರಿಂದ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಪೆಟ್ರೋಲ್ ದರ ಜಾಸ್ತಿ ಇದೆ.  ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಹೊರೆ ಒಟ್ಟು ರೂ 37.36ರಷ್ಟಾಗುತ್ತದೆ.
ಒಂದು ಲೀ ಪೆಟ್ರೋಲ್‌ನ ಮೂಲ ದರ ರೂ 44.42. ಇದರ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ಸೆಸ್ ಸೇರಿದಂತೆ ವಿವಿಧ ರೂಪದಲ್ಲಿ ಪ್ರತಿ ಲೀ.ಗೆ ರೂ 16.77 ತೆರಿಗೆ ವಿಧಿಸುತ್ತಿದೆ. ಹೀಗಾಗಿ ಒಂದು ಲೀಟರ್ ಪೆಟ್ರೋಲ್ ರಾಜ್ಯ ಪ್ರವೇಶಿಸಿದಾಗ 61.19 ರೂಪಾಯಿ ಆಗುತ್ತದೆ.

  ಇದರ ಮೇಲೆ ರಾಜ್ಯ ಸರ್ಕಾರ ಶೇ 5ರ ಪ್ರಕಾರ ಲೀಟರ್‌ಗೆ ರೂ 3.05 ಪ್ರವೇಶ ತೆರಿಗೆ ವಿಧಿಸುತ್ತದೆ. ಆಗ ಲೀಟರ್ ಪೆಟ್ರೋಲ್ ದರ ರೂ 64.24ಕ್ಕೆ ಏರುತ್ತದೆ. ಇದರ ಮೇಲೆ ಶೇ 25ರ ಪ್ರಮಾಣದಲ್ಲಿ ಅಂದರೆ ಲೀಟರ್‌ಗೆ ರೂ 16.05 ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸುತ್ತಿದೆ.

ಮಾರಾಟ ತೆರಿಗೆ ಸೇರಿಸಿದ ನಂತರ ಪ್ರತಿ ಲೀಟರ್ ಪೆಟ್ರೋಲ್ ದರ ರೂ 80.29 ಆಗುತ್ತದೆ. ಇದಲ್ಲದೆ ರೂ 1.49 ಡೀಲರ್ ಕಮೀಷನ್ ಪಡೆಯಲಾಗುತ್ತದೆ. ಈ ಎಲ್ಲ ತೆರಿಗೆಗಳು ಸೇರಿದರೆ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರೂ 81.78 ಆಗುತ್ತದೆ. ಇದು ದೇಶದಲ್ಲೇ ಅತ್ಯಧಿಕ ದರವಾಗಿದೆ. ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಶೇ 5ರಷ್ಟು ಪ್ರವೇಶ ತೆರಿಗೆಯನ್ನು ಕರ್ನಾಟಕದಲ್ಲಿ ಮಾತ್ರ ವಿಧಿಸಲಾಗುತ್ತಿದೆ.

ಬೊಕ್ಕಸಕ್ಕೆ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಪ್ರವೇಶ ತೆರಿಗೆ ವಿಧಿಸುತ್ತಿದೆ. ಆದರೆ ಇದರಿಂದ ಜನರಿಗೆ ಹೊರೆಯಾಗುತ್ತಿದೆ ಎಂಬುದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಅಭಿಪ್ರಾಯ.

ಕರ್ನಾಟಕದಲ್ಲಿ ಶೇ 25ರಷ್ಟು ಮಾರಾಟ ತೆರಿಗೆ ವಿಧಿಸುತ್ತಿದ್ದರೆ, ಆಂಧ್ರಪ್ರದೇಶದಲ್ಲಿ ಶೇ 33, ಕೇರಳ, ತಮಿಳುನಾಡಿನಲ್ಲಿ ಶೇ 27, ಮಹಾರಾಷ್ಟ್ರದಲ್ಲಿ ಶೇ 25 ಹಾಗೂ ಗೋವಾದಲ್ಲಿ ಶೇ 11ರಷ್ಟು ವಿಧಿಸಲಾಗುತ್ತಿದೆ. ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ತೆರಿಗೆ ವಿಧಿಸುತ್ತಿದ್ದರೂ, ಒಟ್ಟಾರೆ ಪೆಟ್ರೋಲ್ ದರ ಕರ್ನಾಟಕಕ್ಕಿಂತ ಕಡಿಮೆ ಇದೆ.

ಕಾರಣ ಆ ರಾಜ್ಯಗಳಲ್ಲಿ ಪ್ರವೇಶ ತೆರಿಗೆ ಇಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಪೂರೈಕೆಯಾಗುವ ಪ್ರತಿ ಲೀ. ಪೆಟ್ರೋಲ್ ದರ ರೂ 1.19 ಪೈ. ಜಾಸ್ತಿ ಇದೆ. ಮಂಗಳೂರಿನಲ್ಲಿ ತೈಲ ಸಂಸ್ಕರಣಾ ಘಟಕ ಇರುವುದರಿಂದ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಒಂದು ಲೀಟರ್ ಮೇಲೆ `ನಿರ್ದಿಷ್ಟ ದರ~ ಎಂಬುದಾಗಿ ರೂ 1.19 ವಿಧಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಈ ದರ ರದ್ದಾಗುತ್ತದೆ ಎಂದು ಅವರು ಹೇಳಿದರು.

ಚಿಂತನೆ: ರಾಜ್ಯ ಸರ್ಕಾರ ಶೇ 5ರಷ್ಟು ಪ್ರವೇಶ ತೆರಿಗೆ ಮತ್ತು ಶೇ 25ರಷ್ಟು ಮಾರಾಟ ತೆರಿಗೆ ವಿಧಿಸುತ್ತಿರುವುದರಿಂದ ಪ್ರತಿ ಲೀಟರ್ ಪೆಟ್ರೋಲ್‌ನ ಒಟ್ಟು ದರ ಜಾಸ್ತಿ ಇದೆ. ಆದ್ದರಿಂದ ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.