ADVERTISEMENT

ಪೊಲೀಸರೇನು ಸೂಪರ್‌ಮ್ಯಾನ್‌ಗಳೇ?

ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ನಿರ್ದೇಶನ ನೀಡಿದೆ. ಅಲ್ಲದೆ, ಪೊಲೀಸ್ ಸಿಬ್ಬಂದಿ ಮೇಲೆ ಅತಿಯಾದ ಜವಾಬ್ದಾರಿ ಹೊರಿಸುವ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, `ಎಲ್ಲ ಕೆಲಸಗಳನ್ನೂ ಒಬ್ಬರೇ ಮಾಡಲು ಪೊಲೀಸರನ್ನು ಸೂಪರ್‌ಮ್ಯಾನ್‌ಗಳು ಎಂದು ಸರ್ಕಾರ ಭಾವಿಸಿದೆಯೇ?' ಎಂದು ಮೌಖಿಕವಾಗಿ ಪ್ರಶ್ನಿಸಿದೆ.

ಪೊಲೀಸ್ ದೂರು ಪ್ರಾಧಿಕಾರ ರಚಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಎಂ.ಆರ್. ರಾಜಕುಮಾರ್ ಎಂಬುವರು ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ, `ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ' ಎಂದು ಪ್ರಶ್ನಿಸಿತು. ಈ ಅರ್ಜಿ ಜೊತೆಗೆ, ಅತ್ಯಾಚಾರ ಪ್ರಕರಣಗಳ ಸೂಕ್ತ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೀಠ ನಡೆಸಿತು.

`ಅಪರಾಧ ಪ್ರಕರಣಗಳ ತನಿಖೆಗೆ ಹಾಗೂ ಕಾನೂನು- ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕ ತಂಡ ಇರಬೇಕು. ಆದರೆ ಇಲಾಖೆಯಲ್ಲಿ 4 ಸಾವಿರದಷ್ಟು ಹುದ್ದೆಗಳು ಖಾಲಿ ಇವೆ. ಪೊಲೀಸರು ಈ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅವರನ್ನು ಸೂಪರ್‌ಮ್ಯಾನ್‌ಗಳು ಎಂದು ಸರ್ಕಾರ ಭಾವಿಸಿದೆಯಾ' ಎಂದು ಪ್ರಶ್ನಿಸಿತು.

ಪೊಲೀಸರನ್ನು ಅತಿಗಣ್ಯ ವ್ಯಕ್ತಿಗಳ ಭದ್ರತೆಗೆ ಹಾಗೂ ಅವರ ಸಂಚಾರ ಸುಗಮ ಆಗಿರುವಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನ ಸೆಳೆದರು. `ಹಾಗಾದರೆ ಜನರಿಗೆ ರಕ್ಷಣೆ ನೀಡುವವರು ಯಾರು? ಜನರ ಜೀವಕ್ಕೆ ರಕ್ಷಣೆ ನೀಡಬೇಕಾಗಿರುವುದು ಅಧಿಕಾರದಲ್ಲಿರುವವರ ಕರ್ತವ್ಯ. ಅದರಲ್ಲಿ ವಿಫಲರಾದರೆ, ಅಧಿಕಾರಸ್ಥರು ಎಷ್ಟೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದಕ್ಕೆ ಬೆಲೆ ಇರುವುದಿಲ್ಲ' ಎಂದು ಪೀಠ ಖಾರವಾಗಿ ನುಡಿಯಿತು.

ಅಪರಾಧ ಪ್ರಕರಣಗಳ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರು, ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.