ADVERTISEMENT

ಪೊಲೀಸರ ವಶದಿಂದ ‘ಎಂಎಲ್‌ಸಿ’ ಸೋಮಣ್ಣ ಪರಾರಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:40 IST
Last Updated 12 ಏಪ್ರಿಲ್ 2018, 19:40 IST
ಪೊಲೀಸರ ವಶದಿಂದ ‘ಎಂಎಲ್‌ಸಿ’ ಸೋಮಣ್ಣ ಪರಾರಿ
ಪೊಲೀಸರ ವಶದಿಂದ ‘ಎಂಎಲ್‌ಸಿ’ ಸೋಮಣ್ಣ ಪರಾರಿ   

ಬೆಂಗಳೂರು/ಚಿತ್ರದುರ್ಗ: ವಂಚನೆ ಆರೋಪದಡಿ ಬಂಧಿಸಲಾಗಿದ್ದ ಎಲ್‌.ಸೋಮಣ್ಣ ಅಲಿಯಾಸ್ ‘ಎಂಎಲ್‌ಸಿ’, ಪೊಲೀಸರ ವಶದಿಂದ ಗುರುವಾರ ತಪ್ಪಿಸಿಕೊಂಡಿದ್ದಾನೆ.

ಸಾಮೂಹಿಕ ಮದುವೆ ನೆಪದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಂದ 187 ಚಿನ್ನದ ತಾಳಿಗಳನ್ನು ಪಡೆದು ವಂಚಿಸಿದ್ದ ಆರೋಪದಡಿ ಬಸವೇಶ್ವರ ನಗರ ಠಾಣೆಯ ಪೊಲೀಸರು, ಸೋಮಣ್ಣನನ್ನು ಬಂಧಿಸಿದ್ದರು. ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದ್ದರು. ‘ಚಿನ್ನದ ತಾಳಿಗಳನ್ನು ಚಿತ್ರದುರ್ಗದ ಮಳಿಗೆಯೊಂದರಲ್ಲಿ ಮಾರಾಟ ಮಾಡಿದ್ದೇನೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೊಂಡಿದ್ದ.

ಅದೇ ಕಾರಣಕ್ಕೆ ಇನ್‌ಸ್ಪೆಕ್ಟರ್‌ ಸೋಮಶೇಖರ್ ನೇತೃತ್ವದ ತಂಡ, ಆರೋಪಿಯನ್ನು ಗುರುವಾರ ಬೆಳಿಗ್ಗೆ ಚಿತ್ರದುರ್ಗಕ್ಕೆ ಕರೆದೊಯ್ದಿತ್ತು. ಅಲ್ಲಿಯ ‘ಧನಲಕ್ಷ್ಮಿ ಜ್ಯುವೆಲರಿ’ ಮಳಿಗೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿತ್ತು. ಅದೇ ವೇಳೆ ಮಳಿಗೆಯ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದ ಸೋಮಣ್ಣ, ಅಲ್ಲಿಯ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಸೋಮಶೇಖರ್‌, ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಯೊಬ್ಬರಿಂದ ₹2.40 ಕೋಟಿ, ಎ. ಪುರುಷೋತ್ತಮ ಎಂಬುವರಿಂದ ₹62 ಲಕ್ಷ ಪಡೆದು ವಂಚಿಸಿದ್ದ ಆರೋಪ ಸೋಮಣ್ಣನ ಮೇಲಿದೆ. ಆತನ ಬಂಧನದ ನಂತರ ನಗರದ 5 ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.