ADVERTISEMENT

ಪೊಲೀಸ್‌ ಸಿಬ್ಬಂದಿ ನೇಮಕಾತಿ ವಿಳಂಬ

ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಸಂವಿಧಾನದ 371(ಜೆ) ಕಲಂ ಪ್ರಕಾರ ಹೈದರಾಬಾದ್‌–ಕರ್ನಾಟಕದ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ನಿರ್ಧಾರ ಜಾರಿಗೊಳಿಸು­ವವರೆಗೂ ಪೊಲೀಸ್‌ ಇಲಾಖೆಯಲ್ಲಿ ಹೊಸ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯ­ಮೂರ್ತಿ ಬಿ.ವಿ. ನಾಗರತ್ನಾ ಅವರಿದ್ದ ವಿಭಾ ಗೀಯ ಪೀಠದಲ್ಲಿ ಪೊಲೀಸ್‌ ವ್ಯವಸ್ಥೆ ಸುಧಾರಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವ­ಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯ­ದರ್ಶಿ ಸುಷ್ಮಾ ಗೋಡಬೋಲೆ, ಹೈದರಾ ಬಾದ್‌–ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ ಹೊಸ ನೇಮಕಾತಿ ಮಾಡಲಾಗದು ಎಂದು ತಿಳಿಸಿದರು.

ಹೈದರಾಬಾದ್‌–ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಅದರಂತೆ ಆ ಭಾಗದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕಿದೆ. ಇದಕ್ಕಾಗಿ ಮೀಸಲಾ ತಿಯ ಪ್ರಮಾಣದ ಮರು­ನಿಗದಿ ಮಾಡಬೇಕಿದೆ. ಸರ್ಕಾರ ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪೂರ್ಣಗೊಂಡ ತಕ್ಷಣವೇ ನೇಮಕಾತಿಗೆ ಚಾಲನೆ ದೊರೆಯಲಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.

8,500 ಪೊಲೀಸ್‌ ಕಾನ್‌ಸ್ಟೆಬಲ್‌­ಗಳ ನೇಮಕಾತಿಗೆ ರಾಜ್ಯ ಸರ್ಕಾರ ಜೂನ್‌ ತಿಂಗಳಲ್ಲಿ ಅನುಮತಿ ನೀಡಿತ್ತು. ಆದರೆ, ಹೈದರಾಬಾದ್‌–ಕರ್ನಾಟಕ ದ ಜನರಿಗೆ ವಿಶೇಷ ಮೀಸಲಾತಿ ಒದಗಿಸುವ ಕಾರಣದಿಂದ ಅನುಮತಿ ಹಿಂದಕ್ಕೆ ಪಡೆದಿದೆ. ಆದ್ದರಿಂದ ನೇಮಕ ಪ್ರಕ್ರಿಯೆ  ತಡೆಹಿಡಿಯಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಾಗೂ ತನಿಖಾ ಕಾರ್ಯಕ್ಕೆ ಪ್ರತ್ಯೇಕ ಪೊಲೀ ಸರನ್ನು ನಿಯೋಜಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿ ಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮಾಡುವ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸುವುದಕ್ಕೂ ಕ್ರಮ ಕೈ ಗೊಳ್ಳಲಾಗಿದೆ ಎಂದು ಪ್ರಮಾಣ­ಪತ್ರದಲ್ಲಿ ವಿವರ ನೀಡಿದ್ದಾರೆ.

ಪ್ರಮಾಣಪತ್ರವನ್ನು ದಾಖಲಿಸಿ­ಕೊಂಡ ಮುಖ್ಯ ನ್ಯಾಯಮೂರ್ತಿ­ಯವರು, ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮತ್ತು  ಚಾಲನಾ ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಪ್ರಸ್ತಾಪಿಸಿದರು. ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದರು. ಆದರೆ, ಸರ್ಕಾರ ಸರಿಯಾದ ಉತ್ತರ ನೀಡಲಿಲ್ಲ.

‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಮದ್ಯ ಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಯಾರೂ ಸಹಿಸಿ ಕೊಳ್ಳ­ಬಾರದು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಹಿಡಿದು, ಜೈಲಿಗೆ ಕಳುಹಿಸಬೇಕು. ಆಗ ಮಾತ್ರ ಜನರಿಗೆ ಭಯ ಇರಲು ಸಾಧ್ಯ’ ಎಂದು ನ್ಯಾ.ವಘೇಲಾ ಅಭಿಪ್ರಾಯ ವ್ಯಕ್ತಪಡಿಸಿ ದರು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ನಿಯಂತ್ರಿ ಸಲು ಕೈಗೊಂಡಿ­ರುವ ಕ್ರಮಗಳ ಬಗ್ಗೆ ವಿವರವಾದ ಪ್ರಮಾಣಪತ್ರ ಸಲ್ಲಿಸು ವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಅವರು, ವಿಚಾರಣೆಯನ್ನು ಮುಂದೂ­ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.