ADVERTISEMENT

ಪೊಲೀಸ್‌ ಅಧಿಕಾರಿ ಪತಿಯಿಂದ ವೈದ್ಯರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST

ವೈದ್ಯರ ಮೇಲೆ ಪೊಲೀಸ್‌ ಅಧಿಕಾರಿ ಪತಿಯಿಂದ ಹಲ್ಲೆ

ಬಳ್ಳಾರಿ: ನಗರದ ಮಹಿಳಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಗಾಯತ್ರಿ ಅವರ ಪತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಲ್ಪಸಂಖ್ಯಾತರ ಘಟಕದ ಮುಖಂಡ ಫರ್ಹಾನ್‌ ಅಹ್ಮದ್‌ ಅವರು, ಜಿಲ್ಲಾ ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ವೈದ್ಯ ವಿನೋದ್‌ ಅವರ ಮೇಲೆ ಬುಧವಾರ ಹಲ್ಲೆ ನಡೆಸಿದ್ದಾರೆ.

‘ಬೆಳಿಗ್ಗೆ 11.30ಕ್ಕೆ ಹಲ್ಲೆ ಮಾಡಲಾಗಿದೆ. ಗರ್ಭಿಣಿ ಪೊಲೀಸ್‌ ಅಧಿಕಾರಿಯು ಸಮವಸ್ತ್ರದಲ್ಲಿಯೇ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವಿಭಾಗದಲ್ಲಿ ಮೂರ್ನಾಲ್ಕು ಮಹಿಳೆಯರಿದ್ದರು. ಮಹಿಳೆಯೊಬ್ಬರ ಆರೋಗ್ಯ ತಪಾಸಣೆ ನಡೆದಿದ್ದು, ಕಾಯುವಂತೆ ವೈದ್ಯರು ಹೇಳಿದ್ದಾರೆ. ಆದರೆ, ಅವರೊಂದಿಗೆ ಇನ್‌ಸ್ಪೆಕ್ಟರ್‌ ಗಾಯತ್ರಿ ವಾಗ್ವಾದ ನಡೆಸಿದ್ದಾರೆ. ತಪಾಸಣಾ ಕೊಠಡಿಯಾಚೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಯ ಪತಿ ಫರ್ಹಾನ್‌ ಅಹ್ಮದ್‌ ವೈದ್ಯರ ಕತ್ತಿನಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದರು’ ಎಂದು ಭಾರತೀಯ ವೈದ್ಯಕೀಯ ಸಂಘದ ಪ್ರಮುಖ ಡಾ.ಬಿ.ಕೆ.ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಕಚೇರಿಯಲ್ಲಿ ಸಂಘದ ಸದಸ್ಯರು ಸಭೆ ನಡೆಸಿದ ಸಂದರ್ಭದಲ್ಲಿ, ಹಲ್ಲೆಗೀಡಾದ ವೈದ್ಯ ವಿನೋದ್‌ ಈ ಮಾಹಿತಿ ನೀಡಿದ್ದರು. ಈ ಬಗ್ಗೆ ದೂರು ದಾಖಲಾಗಿಲ್ಲ.

ಕರಡಿ ದಾಳಿ: ಹಸುಳೆ ಸಾವು

ಭದ್ರಾವತಿ: ಕರಡಿ ದಾಳಿಗೆ ನಾಲ್ಕು ತಿಂಗಳ ಹಸುಳೆ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲ್ಲೂಕಿ ಹಡ್ಲಘಟ್ಟ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮನೆಯ ಅಂಗಳದಲ್ಲಿ ಬೆಳಿಗ್ಗೆ ದಾಳಿ ನಡೆದಿದೆ. ಪೂರ್ವಿ ಮೃತಪಟ್ಟು ಮಗು. ತಾಯಿ ಗೌರಮ್ಮ, ತಂದೆ ಕುಮಾರ್ ಹಾಗೂ ಅಕ್ಕ ಲಾವಣ್ಯ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಗ್ರಾಮದ ಮನೆಯ ಮುಂದೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರು ಅಂಗಳದಲ್ಲಿ ಕುಳಿತಿದ್ದ ವೇಳೆ ತಾಯಿ ಗೌರಮ್ಮ ಅವರ ತೊಡೆಯ ಮೇಲಿದ್ದ ಪೂರ್ವಿ ತಲೆಗೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ರಕ್ಷಣೆಗೆ ಮುಂದಾದ ಉಳಿದವರ ಮೇಲೂ ದಾಳಿ ನಡೆಸಿದ ಕರಡಿ ಸುತ್ತಲಿನ ಗ್ರಾಮಸ್ಥರು ಸೇರುತ್ತಿದ್ದಂತೆ ಓಡಿ ಹೋಗಿದೆ.

ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಸಾವನ್ನಪ್ಪಿದ್ದಳು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಈಗ್ಗೆ 15 ದಿನಗಳಿಂದ ಕರಡಿ ಹಾವಳಿ ಜಾಸ್ತಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.