ADVERTISEMENT

ಪೊಲೀಸ್ ವಶಕ್ಕೆ ಸೈಕೊ ಶಂಕರ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಕೈದಿ ಜೈಶಂಕರ್ ಅಲಿಯಾಸ್ ಶಂಕರ್‌ನನ್ನು ಹೆಚ್ಚಿನ ತನಿಖೆಗಾಗಿ ಸೆ.16ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನಗರದ ಒಂಬತ್ತನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದ ತನಿಖಾಧಿಕಾರಿಗಳು ಜೈಶಂಕರ್‌ನನ್ನು ಶುಕ್ರವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.

ನಂತರ ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಮಡಿವಾಳ ಉಪ ವಿಭಾಗದ ಎಸಿಪಿ ಬಾಲಾಜಿಸಿಂಗ್ ನೇತೃತ್ವದ ವಿಶೇಷ ತಂಡ, ರಾತ್ರಿಯಿಡೀ ವಿಚಾರಣೆ ನಡೆಸಿತು. ಶನಿವಾರ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದರು.

`ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಆತ ಮೂರ‌್ನಾಲ್ಕು ದಿನಗಳ ಕಾಲ ಎಲ್ಲಿ ತಲೆಮರೆಸಿಕೊಂಡಿದ್ದ, ಬ್ಯಾರಕ್‌ನ ನಕಲಿ ಕೀ ಹೇಗೆ ಸಿಕ್ಕಿತು, ಕಾರಾಗೃಹದ ಸಿಬ್ಬಂದಿ ಅಥವಾ ಇತರೆ ಕೈದಿಗಳು ತಪ್ಪಿಸಿಕೊಳ್ಳಲು ನೆರವು ನೀಡಿದ್ದರೇ ಎಂಬ ಬಗ್ಗೆ ಜೈಶಂಕರ್‌ನ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಕರಣ ಸಂಬಂಧ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಅಮಾನತುಗೊಂಡಿರುವ ಕಾರಾಗೃಹದ 11 ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ. ಜೈಲಿನಿಂದ ಪರಾರಿಯಾಗುವ ಯತ್ನದಲ್ಲಿ ಜೈಶಂಕರ್ ಕಾಂಪೌಂಡ್‌ನಿಂದ ಕೆಳಗೆ ಜಿಗಿದಿದ್ದರಿಂದ ಆತನ ಎಡಗಾಲಿನ ಮೂಳೆ ಮುರಿದಿದೆ. ಈ ಕಾರಣಕ್ಕಾಗಿ ಆತನಿಗೆ ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.