ADVERTISEMENT

ಪೋಸ್ಕೊ ಪರವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪ್ರಸ್ತಾವ ತಿರಸ್ಕಾರ ಸಂಭವ

ಬಿ.ಅರವಿಂದ
Published 14 ನವೆಂಬರ್ 2011, 19:30 IST
Last Updated 14 ನವೆಂಬರ್ 2011, 19:30 IST

ಹುಬ್ಬಳ್ಳಿ: ಪೋಸ್ಕೊ ಸಂಸ್ಥೆಯ ಉಕ್ಕು ಹಾಗೂ ಉಷ್ಣ ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಯ ಕುರಿತ ಪರಿಷೃತ ಪ್ರಸ್ತಾವವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿದರೂ ಅದನ್ನು ಸರ್ಕಾರ ಪುರಸ್ಕರಿಸುವ ಸಾಧ್ಯತೆಗಳು ಕಡಿಮೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ ಸಮೀಪ ಸುಮಾರು ಐದು ಸಾವಿರ ಎಕರೆ ಜಾಗದಲ್ಲಿ ಉಕ್ಕು ಘಟಕ ನಿರ್ಮಿಸಲು ಗುರುತಿಸಲಾಗಿದ್ದ ಐದು ಸಾವಿರ ಎಕರೆಯಷ್ಟು ಜಾಗಕ್ಕೆ ಮಠಾಧೀಶರು ಮತ್ತು ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಗದುಗಿನ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿ ಹಾಗೂ ಮುಂಡರಗಿಯ ಅನ್ನದಾನೀಶ್ವರ ಮಠದ ಅನ್ನದಾನೀಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೋಸ್ಕೊ ವಿರುದ್ಧ ಮೂರು ತಿಂಗಳ ಹಿಂದೆ ದೊಡ್ಡ ಹೋರಾಟವೇ ನಡೆದಿತ್ತು. ಇದರ ಹಿನ್ನೆಲೆಯಲ್ಲಿ ಸರ್ಕಾರ ಪೋಸ್ಕೊ ಹಳ್ಳಿಗುಡಿಗೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.

ಆದರೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ರೈತರಲ್ಲಿ ಎರಡು ಗುಂಪುಗಳಾಗಿ, ಒಂದು ಗುಂಪು ಪೋಸ್ಕೊಕ್ಕೆ ಜಮೀನು ನೀಡಲು ಮುಂದಾಗಿ ಮಂಡಳಿಗೆ ಪತ್ರವನ್ನು ಕೊಟ್ಟಿತ್ತು.

`ಯಾರು ಏನೇ ಪತ್ರವನ್ನು ಕೊಟ್ಟರೂ ಸಹ ಸರ್ಕಾರ ಮಠಾಧೀಶರ ಭಾವನೆಗಳನ್ನು ಗೌರವಿಸುತ್ತದೆ. ಇಲ್ಲಿ ಎಲ್ಲ ರೈತರು ಸಮ್ಮತಿಸಿದರೂ ಪೋಸ್ಕೊ ಸ್ಥಾಪನೆ ಮಾಡುವುದಿಲ್ಲ~ ಎಂಬುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಉತ್ತರಾಧಿಕಾರಿ ಡಿ.ವಿ.ಸದಾನಂದ ಗೌಡ ಅವರು ಸ್ಪಷ್ಟನುಡಿಗಳಲ್ಲಿ ಹೇಳಿದ್ದರು. ಇವರಿಬ್ಬರ ಮಾತನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅನುಮೋದಿಸಿದ್ದರು.

ಆದರೆ ಸ್ಥಾಪನೆಯ ಪರ ಇರುವವರ ಪತ್ರವನ್ನು ಮುಂದಿಟ್ಟುಕೊಂಡ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಮಂಗಳವಾರ ನಡೆಯುವ ಸಭೆಯಲ್ಲಿ ಇದನ್ನು ಮುಂದಿಟ್ಟು `ಮರಳಿ ಯತ್ನವ ಮಾಡು~ ಎನ್ನುವ ಆಲೋಚನೆ ಹೊಂದಿದೆ. ಪೋಸ್ಕೊಕ್ಕೆ ಪರ್ಯಾಯ ಸ್ಥಳವನ್ನು ಇದುವರೆಗೆ ಗುರುತಿಸಲು ಆಗದಿರುವುದೇ ಇಂತಹ ಯತ್ನಕ್ಕೆ ಕಾರಣ ಎಂಬುದಾಗಿ ಮಂಡಳಿಯ ಅಧಿಕಾರಿಯೊಬ್ಬರು ~ಪ್ರಜಾವಾಣಿ~ಗೆ ತಿಳಿಸಿದರು. ಜೊತೆಗೆ, ಪತ್ರವನ್ನಂತೂ ಸಭೆಯ ಮುಂದಿಡಲಾಗುವುದು ಎಂದು ಹೇಳಿದರು.

ಆದರೆ ಒಂದು ವೇಳೆ ಪೋಸ್ಕೊ ಸ್ಥಾಪನೆಯ ಪರವಾಗಿರುವರ ಸಂಖ್ಯೆ ಹೆಚ್ಚಿದೆ ಎಂಬುದಾಗಿ ಮಂಡಳಿಯ ಸಭೆಯಲ್ಲಿ ವಿಷಯ ಮಂಡನೆಯಾದರೂ ಕೂಡ ಮಠಾಧೀಶರಿಗೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಮತ್ತು ತಪ್ಪಬಾರದು ಎಂಬುದು ಕೈಗಾರಿಕಾ ಸಚಿವರ ನಿಲುವಾಗಿದೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ. ಅವರ ನಿಲುವನ್ನು ತಿಳಿಯಲು ನಿರಾಣಿ ಅವರನ್ನು ಸಂಪರ್ಕಿಸಲು ~ಪ್ರಜಾವಾಣಿ~ ಮಾಡಿದ ಯತ್ನ ಫಲಕಾರಿಯಾಗಲಿಲ್ಲ.

ಆದರೆ ಅವರ ಆಪ್ತ ವಲಯದ ಪ್ರಕಾರ ನಿರಾಣಿ ಯಾವುದೇ ಕಾರಣಕ್ಕೂ ಪೋಸ್ಕೊ ಹಳ್ಳಿಗುಡಿಯಲ್ಲಿ ಸ್ಥಾಪನೆಯಾಗುವುದರ ಪರ ನಿಲ್ಲುವುದಿಲ್ಲ. ಮುಖ್ಯಮಂತ್ರಿಗಳೂ ಕೂಡ ಈಗಾಗಲೇ ಪ್ರಕಟಿಸಿದ ನಿಲುವಿಗೇ ಬದ್ಧರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಕಾರಣಕ್ಕಾಗಿ ಹಳ್ಳಿಗುಡಿಗೆ ಪೋಸ್ಕೊ ತರಬೇಕೆನ್ನುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಯತ್ನ ಯಶಸ್ವಿಯಾಗದು ಎಂದೇ ಹೇಳಲಾಗುತ್ತಿದೆ. ~ಸ್ಥಳೀಯರಿಗೆ ಉದ್ಯೋಗ ನೀಡುವ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲು ನಮ್ಮ ಅಭ್ಯಂತರವಿಲ್ಲ.
 
ಹಾಗೆಯೇ ಈ ಭಾಗದ ಮೆಕ್ಕೆಜೋಳ ಮತ್ತು ಗೋಧಿ ಉತ್ಪನ್ನಗಳ ತಯಾರಿಕೆಯ ಉದ್ಯಮಗಳು ಬರುವುದಾದರೆ ಅಡ್ಡಿ ಇಲ್ಲ~ ಎಂದು ಗದುಗಿನ ಶ್ರೀಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪೋಸ್ಕೊ ಉಕ್ಕು ಘಟಕಕ್ಕೆ ಮಾತ್ರ ಯಾವುದೇ ಕಾರಣಕ್ಕೂ ಅವಕಾಶವನ್ನು ರೈತರು ನೀಡಬಾರದು ಎನ್ನುವುದು ಶ್ರೀಗಳ ಸಲಹೆ. ಈ ಸಲಹೆಯನ್ನು ಮೀರಿ ರೈತರು ದುಡ್ಡಿನ ಆಸೆಗಾಗಿ ಗುಂಪುಗಳಾಗಿ ಒಡೆದರೆ, ಗೋವಾಕ್ಕೆ ಗುಳೆ ಹೋಗುವುದೊಂದೇ ಅವರಿಗೆ ಉಳಿದ ದಾರಿ ಎಂಬುದಾಗಿ ಮಠಾಧೀಶರು ಹೇಳಿದ್ದಾರೆ.

ಏನೇ ಆದರೂ, ಮಂಡಳಿಯ ಸಭೆಯಲ್ಲಿ ಹಳ್ಳಿಗುಡಿಯಲ್ಲಿ ಪೋಸ್ಕೊ ಸ್ಥಾಪನೆಯ ಪರವಾಗಿ ಅಧಿಕಾರಿಗಳಿಂದ ಪ್ರಸ್ತಾವ ಮಂಡನೆ ಆಗುತ್ತದೆ. ಆದರೆ ಅದಕ್ಕೆ ಪುರಸ್ಕಾರ ದೊರೆಯುವ ಸಾಧ್ಯತೆಗಳು ಕಡಿಮೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.