ADVERTISEMENT

ಪೌರಕಾರ್ಮಿಕರ ಸಮಸ್ಯೆ: ಹೈಕೋರ್ಟ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 18:30 IST
Last Updated 11 ಮಾರ್ಚ್ 2011, 18:30 IST

ಬೆಂಗಳೂರು: ‘ಗುಲ್ಬರ್ಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ಅವರಿಗೆ ಸಮಾನ ವೇತನ ನೀಡುವಾಗ ರಾಜ್ಯದ ಬೇರೆ ಕಡೆಯ ನೌಕರರಿಗೆ ಇದನ್ನು ಅನ್ವಯಿಸುವುದು ಏಕೆ ಸಾಧ್ಯವಾಗುವುದಿಲ್ಲ’ ಎಂದು ಹೈಕೋರ್ಟ್ ಶುಕ್ರವಾರ ಸರ್ಕಾರವನ್ನು ಪ್ರಶ್ನಿಸಿತು.

‘ಇಂದು ಪೌರ ಕಾರ್ಮಿಕರ ಸ್ಥಿತಿಗತಿ ನೋಡಿದರೆ ಬಹಳ ದುಃಖವಾಗುತ್ತದೆ. ಇವರಂತೆ ವಿದ್ಯುತ್ ಕೆಲಸ ಮಾಡುವ ಕೂಲಿಕಾರರ ಕೆಲಸ ಗಮನಿಸಿದರೆ ನೋವಾಗುತ್ತದೆ. ಅವರ ರಕ್ಷಣೆಗೆ ಕನಿಷ್ಠ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಇದರಿಂದ ಅವರ ಜೀವಕ್ಕೆ ಅಪಾಯವಾಗುತ್ತಿದೆ. ಇದು ಅತ್ಯಂತ ಶೋಚನೀಯ ವಿಷಯ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.

ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ, ಗುಲ್ಬರ್ಗದಲ್ಲಿ ಅನುಕೂಲ ಕಲ್ಪಿಸಿರುವುದು ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ಬಂತು. ಇದನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸುವ ಅಗತ್ಯ ಇದೆ ಎಂದು ಪೀಠ ಹೇಳಿತು.ಸೂಕ್ತ ಸೌಲಭ್ಯ ಇಲ್ಲದೇ ಈಚೆಗೆ ರಾಜೇಶ್ವರಿ ಎಂಬ ಪೌರಕಾರ್ಮಿಕರೊಬ್ಬರು ದುರ್ಮಣಕ್ಕೆ ಈಡಾದ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಯನ್ನು ಇದೇ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ಪೀಠದ ಗಮನಕ್ಕೆ ತಂದರು. ಕಾರ್ಮಿಕರ ಸಮಸ್ಯೆಗಳನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಲು ಮುಂದಿನ ಗುರುವಾರ (ಮಾರ್ಚ್ 24) ಅಡ್ವೊಕೇಟ್ ಜನರಲ್ ಅವರು ಹಾಜರಿದ್ದು ವಾದ ಮಂಡಿಸುವಂತೆ ಪೀಠ ನಿರ್ದೇಶಿಸಿದೆ.

ರಾಜ್ಯದ ವಿವಿಧ ನಗರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರ ಮಹಾ ಸಂಘ 2006ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.