ADVERTISEMENT

ಪ್ರಜ್ಞಾಸ್ಫೋಟದಿಂದ ಎಲ್ಲೆ ಮೀರಲು ಸಾಧ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಪ್ರಜ್ಞಾಸ್ಫೋಟದಿಂದ ಎಲ್ಲೆ ಮೀರಲು ಸಾಧ್ಯ
ಪ್ರಜ್ಞಾಸ್ಫೋಟದಿಂದ ಎಲ್ಲೆ ಮೀರಲು ಸಾಧ್ಯ   

ಸಾಗರ: ವೈಯುಕ್ತಿಕ ನೆಲೆಯಿಂದ ಹೊರಟು ಸಮುದಾಯದ ಮೂಲಕ ನಡೆಯುವ ಪ್ರಜ್ಞಾಸ್ಫೋಟದಿಂದ ಮಾತ್ರ ಯಾವುದೇ ವಿಷಯ ಕುರಿತ ಸೀಮೋಲ್ಲಂಘನೆ ಸಾಧ್ಯ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ಭಾನುವಾರ ಆರಂಭಗೊಂಡ ~ಸೀಮೋಲ್ಲಂಘನೆ~  ವಿಷಯ ಕುರಿತ ನೀನಾಸಂ ಸಂಸ್ಕೃತಿ ಶಿಬಿರದ ಆಶಯ ಭಾಷಣ ಮಾಡಿ ಮಾತನಾಡಿದರು.

ಬಸವಣ್ಣ ತನ್ನ ಜಾತಿಯನ್ನು ಬಿಟ್ಟು ನಡೆಸಿದ ಸಾಮಾಜಿಕ ಕ್ರಾಂತಿ, ರಾಮಕೃಷ್ಣ ಪರಮಹಂಸರು ಜನಿವಾರ ಕಿತ್ತು ಹಾಕುವ ಮೂಲಕ ಬ್ರಾಹ್ಮಣ ಎಂಬ ಅಹಂಕಾರದಿಂದ ಹೊರಬಂದು ದೇವರ ದರ್ಶನ ಪಡೆದದ್ದು, ಇವೆಲ್ಲವೂ ಸೀಮೋಲ್ಲಂಘನೆಯ ವ್ಯಾಖ್ಯಾನದೊಳಗೆ ಸೇರುತ್ತದೆ ಎಂದು ಅವರು ವಿಶ್ಲೇಷಿಸಿದರು.

ರಾಜಕಾರಣದಲ್ಲಿ ಸೀಮೋಲ್ಲಂಘನೆಯ ಕ್ರಿಯೆ ನಿತ್ಯ ನಡೆಯುತ್ತಿದ್ದರೆ ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆ ಸಕ್ರಿಯವಾಗಿದೆ ಅಂತಲೇ ಅರ್ಥ ಎಂದು ವ್ಯಾಖ್ಯಾನಿಸಿದರು. ಲೇಖಕ ಮನು ಚಕ್ರವರ್ತಿ ಮಾತನಾಡಿ, ಸೀಮೋಲ್ಲಂಘನೆಗೆ ಇರುವ ರಾಜಕೀಯ ನೆಲೆಗಳ ಜತೆಗೆ, ಅದರ ಹಿಂದಿರುವ ಬೌದ್ಧಿಕ ಶಕ್ತಿಯ ಅನಾವರಣ, ತನ್ಮೂಲಕ ನಡೆಯುವ ಪರ್ಯಾಯ ಚಿಂತನೆಯ ಮಾರ್ಗಗಳು ಕೂಡ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

 ಪ್ರಾಸ್ತಾವಿಕ ಮಾತನಾಡಿದ ರಂಗಕರ್ಮಿ ಕೆ.ವಿ. ಅಕ್ಷರ, ಕಲೆ ಮತ್ತು ಸಂಸ್ಕೃತಿಯ ಗುಣ ಎಂದರೆ ಸೀಮೋಲ್ಲಂಘನೆ. ರಾಜಕಾರಣಿಗಳು ಹಾಕುವ ಎಲ್ಲಾ ರೀತಿಯ `ಗೆರೆ~ಗಳನ್ನು, `ಗಡಿ~ಗಳನ್ನು ಅಸ್ಪಷ್ಟಗೊಳಿಸಿ ಅಳಿಸಿ ಹಾಕುವ ಶಕ್ತಿ- ಸಾಮರ್ಥ್ಯ ಇರುವುದು ಕಲೆ ಹಾಗೂ ಸಂಸ್ಕೃತಿಗೆ ಎಂದು ಹೇಳಿದರು.

ಚಿಂತಕ ಜಿ.ಕೆ. ಗೋವಿಂದರಾವ್ ಶಿಬಿರ ಉದ್ಘಾಟಿಸಿದರು. ಲೇಖಕ ಸುಂದರ್ ಸಾರುಕೈ ಅವರು ಅನಂತಮೂರ್ತಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದರು. ನೀನಾಸಂ ವಿದ್ಯಾರ್ಥಿಗಳು ಗೋಪಾಲಕೃಷ್ಣ ಅಡಿಗ ಅವರ ಕವನದ ದೃಶ್ಯರೂಪಕವನ್ನು ಪ್ರಸ್ತುತಪಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.