ADVERTISEMENT

ಪ್ರತಿಷ್ಠೆಯ ಪ್ರಶ್ನೆ:ಬಿಜೆಪಿ-ಕಾಂಗ್ರೆಸ್ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST
ಪ್ರತಿಷ್ಠೆಯ ಪ್ರಶ್ನೆ:ಬಿಜೆಪಿ-ಕಾಂಗ್ರೆಸ್ ಹಣಾಹಣಿ
ಪ್ರತಿಷ್ಠೆಯ ಪ್ರಶ್ನೆ:ಬಿಜೆಪಿ-ಕಾಂಗ್ರೆಸ್ ಹಣಾಹಣಿ   

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಣ ಸಿದ್ಧಗೊಂಡಿದೆ. ಆಡಳಿತಾರೂಢ ಪಕ್ಷವಾದ ಬಿಜೆಪಿಗಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೂ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಈ ಉಪ ಚುನಾವಣೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆ ಎಂದು ಕಂಡು ಬಂದರೂ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪ್ರಬಲ ಸ್ಪರ್ಧೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.

ಈ ಮೊದಲಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿರುವ ಸಂಗಣ್ಣ ಕರಡಿ ಅವರಿಗೆ ಸಹಜವಾಗಿಯೇ ಇದು ಪ್ರತಿಷ್ಠೆಯ ಕಣ. ಅವರು ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯ, ಕ್ಷೇತ್ರದ ಮೇಲಿರುವ ಹಿಡಿತವನ್ನು ಸಾಬೀತು ಪಡಿಸಬೇಕಾಗಿದೆ. ಜೊತೆಗೆ, ಈ ಉಪಚುನಾವಣೆ ನನ್ನ ಪಾಲಿನ ಅಗ್ನಿ ಪರೀಕ್ಷೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆ ಕಾವೇರುವಂತೆ ಮಾಡಿದ್ದಾರೆ.

ಇನ್ನೊಂದೆಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೂ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯೇ. 2008ರಲ್ಲಿ ಈ ಕ್ಷೇತ್ರ ಜೆಡಿಎಸ್‌ಗೆ ಒಲಿದಿತ್ತು. ಆಗ ಜೆಡಿಎಸ್‌ನಿಂದ ಆಯ್ಕೆಗೊಂಡಿದ್ದ ಸಂಗಣ್ಣ ಮಾರ್ಚ್ 3ರಂದು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ಹೀಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲರನ್ನು ಗೆಲ್ಲಿಸುವ ಅನಿವಾರ್ಯತೆ ಜೆಡಿಎಸ್‌ಗಿದೆ. ಹೀಗಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮೆಲ್ಲಾ ಶ್ರಮವನ್ನು ಇಲ್ಲಿ ವ್ಯಯಿಸಿದ್ದಾರೆ. ಡಾ.ಜಿ.ಪರಮೇಶ್ವರ್ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಎರಡನೇ ಉಪಚುನಾವಣೆ ಇದಾಗಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್‌ಗೆ ಗೆಲುವು ತಂದು ಕೊಡುವ ಕಸರತ್ತನ್ನು ಡಾ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿದೆ.
ಆದರೆ, ಮೂರು ಪಕ್ಷಗಳಲ್ಲಿರುವ ಸಮಸ್ಯೆಗಳು ಆಯಾ ಪಕ್ಷಗಳ ಅಭ್ಯರ್ಥಿಯ ಸೋಲು-ಗೆಲುವಿನ ಮೇಲೆ ಪ್ರಭಾವ ಬೀರುವುದು ನಿಶ್ಚಿತ.

ಎರಡನೇ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿರುವ ಸಂಗಣ್ಣ ಪಾಲಿಗೆ ಬಿಜೆಪಿ ಆಡಳಿತದಲ್ಲಿರುವುದು ದೊಡ್ಡ ಶಕ್ತಿ. ಆದರೆ, ಪಕ್ಷದ ರಾಜ್ಯ ನಾಯಕರಲ್ಲಿನ ಶೀತಲ ಸಮರ ಸಂಗಣ್ಣಗೆ ಎರವಾಗಲಿದೆ. ಈ ಮೊದಲೇ, ಸದರಿ ಉಪ ಚುನಾವಣೆ ನನ್ನ ಪಾಲಿನ ಅಗ್ನಿ ಪರೀಕ್ಷೆ ಎಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಭಾರಿ ಪ್ರಚಾರ ಮಾಡಿದ್ದಾರೆ. ಆದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಒಂದು ದಿನ ಮಾತ್ರ ಕ್ಷೇತ್ರಕ್ಕೆ ಬಂದಿದ್ದಾರೆ. ಅದೂ, ನಗರದಲ್ಲಿ ನಡೆದ `ರೋಡ್ ಶೋ~ನಲ್ಲಿ ಪಾಲ್ಗೊಂಡಿದ್ದನ್ನು ಬಿಟ್ಟರೆ ಎಲ್ಲೂ ಮತ ಯಾಚನೆಗೆ ಹೋಗಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾತ್ರ ಪ್ರಚಾರ ಕೈಗೊಂಡರೇ ಹೊರತು, ಯಡಿಯೂರಪ್ಪನವರ ರೀತಿ ಪ್ರಚಾರದ ಬಿರುಗಾಳಿಯನ್ನು ಎಬ್ಬಿಸಲಿಲ್ಲ.

ಪಕ್ಷದಲ್ಲಿನ ಈ ಭಿನ್ನಮತ, ಕಚ್ಚಾಟವನ್ನು ಅಭ್ಯರ್ಥಿ ಸಂಗಣ್ಣ ಹಾಗೂ ಬಿ.ಎಸ್.ಯಡಿಯೂರಪ್ಪ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ.

ಸಂಗಣ್ಣ ಪರಾಭವಗೊಂಡರೆ, ಈ ಸೋಲಿಗೆ ಪಕ್ಷದಲ್ಲಿನ ಕಚ್ಚಾಟ, ಬಿಕ್ಕಟ್ಟು ಕಾರಣ. ನಾಯಕರಾರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರಲಿಲ್ಲ ಎಂದು ಇಬ್ಬರೂ ಹೇಳಬಹುದು. ಗೆದ್ದರೆ, ತಮ್ಮ ವೈಯಕ್ತಿಕ ವರ್ಚಸ್ಸೇ ಕಾರಣ ಎಂಬ ವಿಶ್ಲೇಷಣೆ ನೀಡಬಹುದು.

ಕಾಂಗ್ರೆಸ್ ಅಭ್ಯರ್ಥಿ ಹಿಟ್ನಾಳ್ ಕುರುಬ ಸಮಾಜಕ್ಕೆ ಸೇರಿದವರು. ಹಿಟ್ನಾಳ್ ವಿಜಯ ಸಾಧಿಸುವುದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ. ಇದೇ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಿಟ್ಟರೆ ಕಾಂಗ್ರೆಸ್‌ನ ರಾಜ್ಯ ಮಟ್ಟದ ನಾಯಕರ ಪೈಕಿ ಸಿದ್ದರಾಮಯ್ಯ ಅವರೇ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ಕೈಗೊಂಡಿದ್ದರು ಎನ್ನಲಾಗುತ್ತಿದೆ.

ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವುದು ಆ ಪಕ್ಷಕ್ಕೆ ಸವಾಲೆನಿಸಿದೆ. ಜೊತೆಗೆ, ಜೆಡಿಎಸ್ ನಾಯಕರ ಪೈಕಿ ಜನರನ್ನು ಸೆಳೆಯುವ ವರ್ಚಸ್ಸು ಇರುವವರೆಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರ. ಅವರ ಪರಿಶ್ರಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಷ್ಟು ಸಹಾಯಕವಾಗಲಿದೆ ಎಂಬುದು ಕುತೂಹಲದ ವಿಷಯ.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಬಂಧನ, ಶಾಸಕ ಬಿ. ಶ್ರೀರಾಮುಲು ರಾಜೀನಾಮೆ, ಮಾಜಿ ಮುಖ್ಯಮಂತ್ರಿಗಳಿಬ್ಬರೂ ಕೋರ್ಟ್‌ನ ಕಟಕಟೆಯಲ್ಲಿ ನಿಂತಿರುವುದು ಸೇರಿದಂತೆ ರಾಜ್ಯದ ವಿದ್ಯಮಾನಗಳು, 2ಜಿ ಸ್ಪ್ರೆಕ್ಟ್ರಂ, ಕಾಮನ್‌ವೆಲ್ತ್‌ಗೇಮ್ ಹಗರಣಗಳಂತಹ ಕೇಂದ್ರದಲ್ಲಿನ ಬೆಳವಣಿಗೆಗಳು ಕ್ಷೇತ್ರದ ಮತದಾರರ ಪಾಲಿಗೆ ಚುನಾವಣಾ ವಿಷಯವಾಗಿಲ್ಲ.

ಸಂಗಣ್ಣ ಆಯ್ಕೆಗೊಂಡಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದ ಮತದಾರರ ಮೇಲೆ ಉಪಚುನಾವಣೆ ಹೇರಿದ್ದಾರೆ ಎಂಬ ಆರೋಪವೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚುನಾವಣೆ ವೇಳೆ ಬಳಸಿದ ಪ್ರಮುಖ ಅಸ್ತ್ರ. ಬಿಜೆಪಿಯವರು ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದೂ ಉಭಯ ಪಕ್ಷಗಳ ನಾಯಕರು ದೂರಿದ್ದಾಯಿತು.

ಆದರೆ, ಹಣ ಹಂಚುವ ಸಂಸ್ಕೃತಿಯನ್ನು ಆರಂಭಿಸಿದ್ದೇ ಕಾಂಗ್ರೆಸ್‌ನವರು ಎಂದು ತಿರುಗೇಟು ನೀಡಿದ ಬಿಜೆಪಿ ನಾಯಕರು ಪರೋಕ್ಷವಾಗಿ ಹಣ ಹಂಚಿಕೆಯನ್ನು ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದು ವಿಚಿತ್ರವಾದರೂ ಸತ್ಯ.

ಕ್ಷೇತ್ರದ ಅಭಿವೃದ್ಧಿ ಮಂತ್ರ ಜಪಿಸಿದ ಬಿಜೆಪಿ ನಾಯಕರು, ಸಂಗಣ್ಣ ಬಿಜೆಪಿಗೆ ಸೇರಿದ ನಂತರ ಕ್ಷೇತ್ರದ ಅಭಿವೃದ್ಧಿಗೆ 250 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ ಎಂಬುದಕ್ಕೇ ಹೆಚ್ಚು ಪ್ರಚಾರ ನೀಡಿದರು.

ಉಳಿದಂತೆ ಕ್ಷೇತ್ರದ ಜನತೆ ಪ್ರತಿ ವರ್ಷ ಗುಳೆ ಹೋಗುತ್ತಿರುವುದು, ಕಾರ್ಖಾನೆಗಳಿಗೆ ಭೂಮಿ ಕಳೆದುಕೊಂಡಿರುವ ರೈತರ ಗೋಳು, ಕಾರ್ಮಿಕ ದುಃಸ್ಥಿತಿ, ಕಾರ್ಖಾನೆಗಳ ತ್ಯಾಜ್ಯದಿಂದ ಆಗುತ್ತಿರುವ ಪರಿಸರ ಹಾನಿ, ಹದಗೆಟ್ಟ ರಸ್ತೆಗಳ ಸ್ಥಿತಿ, ಹಿರೇಹಳ್ಳ ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚಾಗಿದ್ದರೂ ಹೊಲಗಳಿಗೆ ನೀರು ತಲುಪದಿರುವುದು ಚುನಾವಣೆಯ ವಿಷಯಗಳಾಗಲಿಲ್ಲ.

ಜಾತಿವಾರು ಮತ ಗಳಿಕೆಗೆ ಹೆಚ್ಚು ಒತ್ತು. ಹೀಗಾಗಿ ಎ್ಲ್ಲಲ ಪಕ್ಷಗಳಲ್ಲಿನ ಆಯಾ ಜಾತಿ ನಾಯಕರು ಮತದಾರರನ್ನು ಓಲೈಸಿದ್ದು ಇದೇ ಚುನಾವಣೆಯಲ್ಲಿ ಹೆಚ್ಚು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಯಾರ ಓಲೈಕೆಗೆ ವಿಜಯಮಾಲೆ ಲಭಿಸಲಿದೆ ಎಂಬ ಪ್ರಶ್ನೆಗೆ ಸೆ. 26ರಂದು ಮತದಾರ ಗುಪ್ತವಾಗಿ ಉತ್ತರ ನೀಡಲಿದ್ದು, ಸೆ. 29ರಂದು ಈ ಉತ್ತರ ಬಹಿರಂಗಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.