ADVERTISEMENT

ಪ್ರತಿ ತಾಲ್ಲೂಕಿಗೆ ಇಬ್ಬರು ತಹಶೀಲ್ದಾರ್

ಚಂದ್ರಹಾಸ ಹಿರೇಮಳಲಿ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ದಾವಣಗೆರೆ: ರಾಜ್ಯದ ಪ್ರತಿ ತಾಲ್ಲೂಕು ಕಚೇರಿಯಲ್ಲೂ ಇನ್ನು ಮುಂದೆ ಇಬ್ಬರು ತಹಶೀಲ್ದಾರರು ಕಾರ್ಯನಿರ್ವಹಿಸಲಿದ್ದಾರೆ. ಎರಡನೇ ತಹಶೀಲ್ದಾರ್ ನೇಮಿಸಿ ಸರ್ಕಾರ ಹೊರಡಿಸಿರುವ ತರಾತುರಿ ಆದೇಶಕ್ಕೆ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್‌ಗಳಿಂದ ವಿರೋಧ ವ್ಯಕ್ತವಾಗಿದೆ.

ಪ್ರಸಕ್ತ ತಾಲ್ಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸ್ತೇದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ವ್ಯವಸ್ಥಾಪಕರ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿದ್ದು, 228 ಮಂದಿಗೆ ತಹಶೀಲ್ದಾರ್ (ಬಿ-ಗ್ರೇಡ್)ಗಳಾಗಿ ಬಡ್ತಿ ನೀಡಲಾಗಿದೆ. ಬಡ್ತಿ ಹೊಂದಿದ ತಹಶೀಲ್ದಾರರು ತಾಲ್ಲೂಕು ಕಚೇರಿಗಳಲ್ಲೇ ಕಾರ್ಯನಿರ್ವಹಿಸಲಿದ್ದು, ಇದುವರೆಗೂ ರೆಗ್ಯೂಲರ್ ತಹಶೀಲ್ದಾರ್ ಹೊಂದಿದ್ದ ಅಧಿಕಾರದಲ್ಲಿ ಪಾಲು ಪಡೆಯಲಿದ್ದಾರೆ.

ಸರ್ಕಾರದ ಆಡಳಿತಾತ್ಮಕ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪತ್ರಾಂಕಿತ ಅಧಿಕಾರಿಗಳಾದ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಕಾರ್ಯಭಾರದ ಒತ್ತಡ ತಗ್ಗಿಸಿ, ಅವರ ಕಾರ್ಯಕ್ಷಮತೆ ಹೆಚ್ಚಿಸಲು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಇಬ್ಬರು ತಹಶೀಲ್ದಾರ್ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎನ್. ಗೋಪಾಲಯ್ಯ ಆದೇಶದಲ್ಲಿ ತಿಳಿಸಿದ್ದಾರೆ.

ತಾಲ್ಲೂಕು ಕಚೇರಿಗಳಲ್ಲಿ ಹೊಸದಾಗಿ ಕಾರ್ಯಭಾರ ವಹಿಸಿಕೊಳ್ಳಲಿರುವ ತಹಶೀಲ್ದಾರರು ಚುನಾವಣೆ, ಭೂಸ್ವಾಧೀನ ಶಾಖೆಯ ನ್ಯಾಯಾಲಯ ಪ್ರಕರಣಗಳ ಸಂಪೂರ್ಣ ಜವಾಬ್ದಾರಿ, ಮೇಲ್ಮನವಿ ಪ್ರಕರಣಗಳಲ್ಲಿ ವಾದಿ-ಪ್ರತಿವಾದಿಗಳಿಗೆ ನೋಟಿಸ್ ನೀಡುವುದು, ಭೂಸ್ವಾಧೀನ ಪರಿಹಾರ ವಿತರಣೆಗಾಗಿ ಉಪ ವಿಭಾಗಾಧಿಕಾರಿ ಜತೆ ಜಂಟಿ ಖಾತೆ ಹೊಂದುವ ಅಧಿಕಾರ ಸೇರಿದಂತೆ ಹಲವು ಅಧಿಕಾರಗಳನ್ನು ಚಲಾಯಿಸಲಿದ್ದಾರೆ.

ದಂಡಾಧಿಕಾರ, ಕಾನೂನು-ಸುವ್ಯವಸ್ಥೆ ಸೇರಿದಂತೆ ಪ್ರಮುಖ ಅಧಿಕಾರಗಳನ್ನು ರೆಗ್ಯೂಲರ್ ತಹಶೀಲ್ದಾರ್ ನಿರ್ವಹಿಸಲಿದ್ದಾರೆ.

ವಿರೋಧ: ಪ್ರಸಕ್ತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರರ ಸಮೂಹದಿಂದ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸರ್ಕಾರದ ಆದೇಶದ ಪ್ರಕಾರ ಬಡ್ತಿ ಹೊಂದಿದ ಶಿರಸ್ತೇದಾರ್‌ಗಳನ್ನು `ಬಿ~ ಗ್ರೇಡ್ ತಹಶೀಲ್ದಾರ್ ಎಂದು, ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್‌ಗಳನ್ನು ರೆಗ್ಯೂಲರ್ ತಹಶೀಲ್ದಾರ್‌ಗಳೆಂದು ಪರಿಗಣಿಸಲಾಗಿದೆ. ಆದರೆ, ಬಹುತೇಕ ರೆಗ್ಯೂಲರ್ ತಹಶೀಲ್ದಾರರು `ಬಿ~ಗ್ರೇಡ್ ಹುದ್ದೆಯಲ್ಲೇ ಇದ್ದು, ಕೆಲವರು ಈಚೆಗಷ್ಟೇ `ಎ~ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ಮುಂದೆ  ರೆಗ್ಯೂಲರ್ ತಹಶೀಲ್ದಾರ್ ಆಗಲು ಏನು ಮಾನದಂಡ ಎನ್ನುವುದು ಸೇರಿದಂತೆ ಅನೇಕ ವಿಚಾರದಲ್ಲಿ ಗೊಂದಲವಿದೆ.

`ತಾಲ್ಲೂಕು ಕಚೇರಿಯಲ್ಲಿನ ಸಿಬ್ಬಂದಿ ಸಂಖ್ಯೆ ಹೆಚ್ಚಿಸದೇ, ಅವ್ಯವಸ್ಥೆ ಸರಿಪಡಿಸಿಲ್ಲ. ತಾಲ್ಲೂಕು ಕಚೇರಿ ಸಿಬ್ಬಂದಿ ಯಾರ ಅಧಿಕಾರ ಪಾಲನೆ ಮಾಡಬೇಕು ಎನ್ನುವ ಗೊಂದಲ ಹಾಗೆಯೇ ಉಳಿದಿದೆ. ಪ್ರತಿ ತಾಲ್ಲೂಕಿನಲ್ಲಿ 2-3 ಉಪ ತಹಶೀಲ್ದಾರ್ ಹುದ್ದೆಗಳಿದ್ದು, ಅವರು ಹೊಂದಿರುವ ಅಧಿಕಾರವನ್ನು ಹೊಸ ತಹಶೀಲ್ದಾರ್‌ಗಳು ಚಲಾಯಿಸುವುದರಿಂದ ರಾಜ್ಯದ 500ರಿಂದ 800 ಉಪ ತಹಶೀಲ್ದಾರ್‌ಗಳಿಗೆ ಕೆಲಸವೇ ಇಲ್ಲದಂತೆ ಆಗುತ್ತದೆ.

ರಾಜ್ಯ ಆಡಳಿತ ಆಯೋಗದಿಂದ ವರದಿ ಪಡೆದು, ಪರಿಶೀಲಿಸಿದ ನಂತರ ನಿಯಮ ಬದಲಾಯಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಪ್ರತಿಭಟನಾ ಮನವಿ ಸಲ್ಲಿಸುತ್ತಿದ್ದೇವೆ~ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪ್ರಮುಖ ತಾಲ್ಲೂಕಿನ ತಹಶೀಲ್ದಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.