ADVERTISEMENT

ಪ್ರತ್ಯೇಕ ಅಪಘಾತ: 7 ಜನ ದುರ್ಮರಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಅಂಕೋಲಾ/ಚಳ್ಳಕೆರೆ: ಅಂಕೋಲಾ ಸಮೀಪದ ಮಾಸ್ತಿಕಟ್ಟೆ ಮತ್ತು ಚಳ್ಳಕೆರೆಯ  ಪುಟ್ಲಾರಹಳ್ಳಿ ಬಳಿ ಭಾನುವಾರ ಹಾಗೂ ಶನಿವಾರ ತಡರಾತ್ರಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಒಟ್ಟು 11 ಜನರು ಗಾಯಗೊಂಡಿದ್ದಾರೆ.  

ಬಸ್-ಟ್ಯಾಂಕರ್ ಡಿಕ್ಕಿ: ನಾಲ್ವರು ಸಾವು
ಅಂಕೋಲಾ (ಉ.ಕ. ಜಿಲ್ಲೆ): ಇಲ್ಲಿಗೆ ಸಮೀಪದ ಮಾಸ್ತಿಕಟ್ಟೆ ಬಳಿ ಭಾನುವಾರ ಖಾಸಗಿ ಬಸ್ ಮತ್ತು ಅನಿಲ ತುಂಬಿದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ.

ಬಸ್ ಚಾಲಕ ಬಾಗಲಕೋಟೆಯ ಬೇಲೂರಿನ ಸಂಗಪ್ಪ ಯಮುನಪ್ಪ ಕಂಬಾರ (46), ಟ್ಯಾಂಕರ್ ಚಾಲಕ ತಮಿಳುನಾಡಿನ ಪೆರಿಯಸ್ವಾಮಿ ಅಣ್ಣಾಮಲೈ (50) ಮತ್ತು ಬಸ್‌ನಲ್ಲಿದ್ದ ಬೆಂಗಳೂರು ಮೂಲದ ಫ್ರೆಡ್ಡಿ ಮಾಲ್ವಿನ್ ಹರ್‌ನಾಲ್ಡೋ (30) ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ  ಬಸ್  ಪ್ರಯಾಣಿಕ ಬಿಹಾರಿನ ದರ್ಬಾಂಗ್ ಮೂಲದ ಸುಮಿತ್ ಕುಮಾರ (32) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಬಸ್ ಬೆಂಗಳೂರಿನಿಂದ ಗೋವಾದ ಪಣಜಿಗೆ ಹೊರಟಿತ್ತು, ಟ್ಯಾಂಕರ್ ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು.

ಗಾಯಗೊಂಡಿರುವ ಪ್ರಯಾಣಿಕ, ಮೂಲತಃ ಬಿಹಾರದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸನ್ನಿ ಕುಮಾರ ಸಂಬಾ ಪ್ರಸಾದ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಪುಟ್ಟ ಗಾಯಗಳಾಗಿರುವ ಇತರ ಕೆಲವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲವು ಗಂಟೆಗಳವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಅಪಘಾತದಲ್ಲಿ  ಟ್ಯಾಂಕರ್‌ನಿಂದ ಅನಿಲ ಸೋರಿಲ್ಲ. ಹೀಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.

ಟ್ರ್ಯಾಕ್ಟರ್ ಪಲ್ಟಿ: ಮೂವರು ಸಾವು
ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಹುಣಸೇಹಣ್ಣು ತುಂಬಿಕೊಂಡು ಚಳ್ಳಕೆರೆ ಸಂತೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ತಾಲ್ಲೂಕಿನ ಪರಶುರಾಂಪುರ ಹೋಬಳಿಯ ಪುಟ್ಲಾರಹಳ್ಳಿ ಸಮೀಪ ಪಲ್ಟಿಯಾಗಿ ಅದರಲ್ಲಿದ್ದ 15 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟು 11 ಜನ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.ಇನ್ನೊಬ್ಬ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾನೆ.

ಮೃತರನ್ನು ಪುಟ್ಲಾರಹಳ್ಳಿ ಗ್ರಾಮದ ಗೋಪಾಲ ನಾಯಕ (45), ಪಾಪಜ್ಜ (40), ಬೋರಯ್ಯ (25) ಎಂದು ಗುರುತಿಸಲಾಗಿದೆ.ಗಾಯಾಳುಗಳು ಚಿತ್ರದುರ್ಗ ಹಾಗೂ ಪರಶುರಾಂಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರ್ಯಾಕ್ಟರ್ ಚಾಲಕ ಮಹೇಶ್ ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.