ADVERTISEMENT

ಪ್ರತ್ಯೇಕ ಶುಲ್ಕ: ವಿದ್ಯಾರ್ಥಿಗಳಿಗೆ ಬರಸಿಡಿಲು

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಬೆಂಗಳೂರು:  ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ನಿಗದಿ ಸಂಬಂಧ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳದ ಕಾಲೇಜುಗಳಿಗೆ ನ್ಯಾಯಮೂರ್ತಿ ಪದ್ಮರಾಜ ಸಮಿತಿ ಶಿಫಾರಸಿನಂತೆ ಕಾಲೇಜುವಾರು ಪ್ರತ್ಯೇಕ ಶುಲ್ಕ ನಿಗದಿಪಡಿಸುವ ಸರ್ಕಾರದ ತೀರ್ಮಾನ ಖಾಸಗಿ ವೃತ್ತಿಶಿಕ್ಷಣ ಕಾಲೇಜುಗಳಿಗೆ ವರದಾನವಾಗಿದ್ದರೆ, ವಿದ್ಯಾರ್ಥಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಪದ್ಮರಾಜ ಸಮಿತಿ ಯಾವ ಕಾಲೇಜಿಗೆ ಎಷ್ಟು ಶುಲ್ಕ ನಿಗದಿಪಡಿಸಿದೆ ಎಂಬ ಮಾಹಿತಿಯನ್ನು ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಲಭ್ಯವಾಗಿರುವ ಮಾಹಿತಿ ಪ್ರಕಾರ 36 ಸಾವಿರದಿಂದ 1.16 ಲಕ್ಷ ರೂಪಾಯಿವರೆಗೆ ಶುಲ್ಕ ನಿಗದಿಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಕಾಲೇಜುಗಳು ಇದುವರೆಗೂ 50 ಸಾವಿರ ರೂಪಾಯಿ ಶುಲ್ಕ ನಿಗದಿಗೆ ಪಟ್ಟು ಹಿಡಿದಿವೆ. ಆದರೆ ಈಗ ಪದ್ಮರಾಜ ಸಮಿತಿ ಶಿಫಾರಸು ಜಾರಿಯಿಂದಾಗಿ ಕೇಳಿದ್ದಕ್ಕಿಂತ ಹೆಚ್ಚಿನ ಶುಲ್ಕ ದೊರೆತಂತಾಗಿದೆ. ಇದರಿಂದಾಗಿ ಖಾಸಗಿ ವೃತ್ತಿಶಿಕ್ಷಣ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಖುಷಿಗೊಂಡಿದ್ದರೆ, ಇಷ್ಟೊಂದು ಶುಲ್ಕವನ್ನು ಭರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು, ಪೋಷಕರು ಆತಂಕಗೊಂಡಿದ್ದಾರೆ.

ADVERTISEMENT

ಪದ್ಮರಾಜ ಸಮಿತಿ ಶಿಫಾರಸು ಪ್ರಕಾರ ಶುಲ್ಕ ನಿಗದಿಪಡಿಸುವಂತೆ ಈಗಾಗಲೇ ಒಕ್ಕೂಟವು ಹೈಕೋರ್ಟ್ ಮೊರೆ ಹೋಗಿದೆ. ನ್ಯಾಯಾಲಯದ ಆದೇಶದ ಪ್ರಕಾರವೇ ಸಮಿತಿ ರಚನೆಯಾಗಿರುವುದರಿಂದ ಒಕ್ಕೂಟದ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವನ್ನು ಒಕ್ಕೂಟದ ಉಪಾಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ಹೊಂದಿದ್ದಾರೆ.

ಕಳೆದ ವರ್ಷ 25 ಸಾವಿರ ರೂಪಾಯಿ ಇದ್ದ ಶುಲ್ಕವನ್ನು ಈ ಬಾರಿ 32,500ಕ್ಕೆ ಏರಿಸಲಾಗಿದೆ. ಅಲ್ಲದೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಶುಲ್ಕ ಸೇರಿದರೆ ಒಟ್ಟಾರೆ 40 ಸಾವಿರ ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಆದರೆ ಕಳೆದ ವರ್ಷ ಎಲ್ಲ ಶುಲ್ಕವೂ ಸೇರಿ 33,090 ರೂಪಾಯಿ ಇತ್ತು.

ಈ ಬಾರಿ ಖಾಸಗಿಯವರು 50 ಸಾವಿರ ರೂಪಾಯಿ ಶುಲ್ಕ ಕೇಳುತ್ತಿದ್ದರೂ, ಅವರ ಮೇಲೆ ಒತ್ತಡ ಹೇರಿದ್ದರೆ ರೂ 35ರಿಂದ 38 ಸಾವಿರಕ್ಕೆ ಒಪ್ಪುತ್ತಿದ್ದರು. ಆದರೆ ಸರ್ಕಾರ 32,500 ರೂಪಾಯಿಗಿಂತ ಹೆಚ್ಚಿಗೆ ಮಾಡುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿತು.

ಆದರೆ ಈಗ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆಯಬೇಕಾದರೆ ಮೂರು ಪಟ್ಟು ಹೆಚ್ಚಿನ ಶುಲ್ಕ ಭರಿಸಬೇಕಾಗಿದೆ.

32,500 ರೂಪಾಯಿಗಿಂತ ಜಾಸ್ತಿ ಮಾಡಲು ಸಾಧ್ಯವಿಲ್ಲ ಎನ್ನುವ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಗೆ, ಪದ್ಮರಾಜ ಸಮಿತಿ ಶಿಫಾರಸು ಜಾರಿಯಿಂದಾಗಿ ಒಂದು ಲಕ್ಷಕ್ಕಿಂತ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ ಎಂಬುದು ಯಾಕೆ ಅರ್ಥವಾಗುವುದಿಲ್ಲ ಎಂಬುದು ಸಿಇಟಿ ಪರೀಕ್ಷೆ ಬರೆದಿರುವ ನಗರದ ವಿದ್ಯಾರ್ಥಿಗಳಾದ ಎಸ್.ನಾಗರಾಜ್, ಎನ್.ಧ್ರುವಕುಮಾರ್ ಮತ್ತವರ ಸ್ನೇಹಿತರ  ಪ್ರಶ್ನೆ.

ಒಳ ಒಪ್ಪಂದ: ‘ಸರ್ಕಾರದ ಈ ನಿಲುವನ್ನು ನೋಡಿದರೆ, ಖಾಸಗಿ ಕಾಲೇಜುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ನೇರವಾಗಿ ಶುಲ್ಕ ಹೆಚ್ಚಳಕ್ಕೆ ಒಪ್ಪಿದರೆ ರಾಜಕೀಯವಾಗಿ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರ ಪದ್ಮರಾಜ ಸಮಿತಿ ಶಿಫಾರಸು ಜಾರಿಗೆ ತರುವ ಮೂಲಕ ಪರೋಕ್ಷವಾಗಿ ಶುಲ್ಕ ಹೆಚ್ಚಳ ಮಾಡಿದೆ. ನಾವು ಜಾಸ್ತಿ ಮಾಡಿಲ್ಲ, ಅದು ಸಮಿತಿಯ ಶಿಫಾರಸು ಎಂದು ಜನರಿಗೆ ಉತ್ತರ ನೀಡಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದರು.

ಈ ವರ್ಷ ಒಟ್ಟಾರೆ ಶುಲ್ಕ ಜಾಸ್ತಿಯಾಗುತ್ತದೆ ಎಂಬುದು ನಿಜ. ಆದರೆ ಯಾವ ಕಾಲೇಜಿನಲ್ಲಿ ಎಷ್ಟು ಜಾಸ್ತಿಯಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಅಲ್ಲದೆ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಒಂದು ವೇಳೆ ನ್ಯಾಯಾಲಯ ಸಮಿತಿ ಶಿಫಾರಸಿನಂತೆ ಮಾಡಿ ಎಂದರೆ ಎಲ್ಲ ಕಾಲೇಜುಗಳಲ್ಲೂ ಶುಲ್ಕ ಹೆಚ್ಚಳವಾಗಲಿದೆ. ಸರ್ಕಾರಿ ನಿಗದಿ ಪಡಿಸಿರುವ 32,500 ರೂಪಾಯಿ ಶುಲ್ಕ ಮಹತ್ವ ಕಳೆದುಕೊಳ್ಳುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.