ADVERTISEMENT

ಪ್ರಧಾನಿಗೆ ಸಿ.ಎಂ ಶೆಟ್ಟರ್ ಪತ್ರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: ತಮಿಳುನಾಡಿಗೆ ಈ ತಿಂಗಳಲ್ಲಿ 12 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲು ಕಾವೇರಿ ಮೇಲುಸ್ತುವಾರಿ ಸಮಿತಿ (ಸಿಎಂಸಿ) ಮಾಡಿರುವ ಶಿಫಾರಸನ್ನು ಕೂಡಲೇ ತಿರಸ್ಕರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್ 11ರಂದು ಸಭೆ ನಡೆಸಿದ್ದ ಸಿಎಂಸಿ, ತಮಿಳುನಾಡಿಗೆ 6.12 ಟಿಎಂಸಿ ಅಡಿ ನೀರು ಬಿಡುವಂತೆ ಸೂಚನೆ ನೀಡಿತ್ತು. ಆದರೆ, ಇದೇ 7ರಂದು ನಡೆದ ಸಭೆಯಲ್ಲಿ ಇದರ ದುಪ್ಪಟ್ಟು, ಅಂದರೆ 12 ಟಿಎಂಸಿ ಅಡಿ ನೀರು ಬಿಡಲು ಸಿಎಂಸಿ ಸೂಚಿಸಿದೆ. ಇಷ್ಟು ಭಾರಿ ಪ್ರಮಾಣದ ನೀರು ಬಿಡುವುದು ಕರ್ನಾಟಕದ ಪಾಲಿಗೆ ಹೊರೆಯಾಗಿದೆ ಎಂದು ಅವರು ಶುಕ್ರವಾರ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇಕಡ 41ರಷ್ಟು ಕಡಿಮೆ ಮಳೆಯಾಗಿದೆ. ಅಕ್ಟೋಬರ್ 11ರಂದು ಸಿಎಂಸಿ ಸಭೆ ನಡೆದಾಗಲೂ ನೀರಿನ ಕೊರತೆ ಇತ್ತು, ಈಗಲೂ ಸಹ ನೀರಿನ ಕೊರತೆ ಪ್ರಮಾಣ ಅಷ್ಟೇ ಇದೆ. ಆಗ 6.12 ಟಿಎಂಸಿ ಅಡಿ ನೀರು ಬಿಡಲು ಆದೇಶಿಸಿದ್ದ ಸಿಎಂಸಿ, ಇದೇ 7ರಂದು ಸಭೆ ನಡೆಸಿ 12 ಟಿಎಂಸಿ ಅಡಿ ನೀರು ಬಿಡುವಂತೆ ಆದೇಶ ನೀಡಿದೆ. ಇದು ನ್ಯಾಯಯುತವಲ್ಲ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

`ನಮ್ಮಲ್ಲೇ ನೀರು ಇಲ್ಲ. ತಮಿಳುನಾಡಿಗೆ 12 ಟಿಎಂಸಿ ಅಡಿ ನೀರು ಬಿಡುವುದು ಹೇಗೆ? ಆ ರೀತಿಯ ಆದೇಶವನ್ನು ನಮಗೆ ನೀಡಿದ್ದಾದರೂ ಹೇಗೆ? ರಾಜ್ಯದ ರೈತರು ಬೆಳೆದಿರುವ ಬೆಳೆ ರಕ್ಷಿಸಲು, ಸಿಎಂಸಿ ಆದೇಶ ತಕ್ಷಣ ತಿರಸ್ಕರಿಸಿ' ಎಂದು ಶೆಟ್ಟರ್  ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.