ಬೆಂಗಳೂರು: ‘ಗುಜರಾತ್ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದರೂ, ದೇಶದ ಜನತೆಯ ಎದುರು ಸುಳ್ಳು ಹೇಳುತ್ತಿರುವ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಭ್ರಮೆಯಲ್ಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
 
 ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮತ್ತಿತರರು ಕಾಂಗ್ರೆಸ್ ಸೇರಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ತಮ್ಮ ರಾಜ್ಯಕ್ಕೆ ಸಂಬಂಧಿಸಿದ ವಾಸ್ತವ ಸಂಗತಿಗಳನ್ನು ಜನರಿಂದ ಮರೆ ಮಾಚುತ್ತಿರುವ ಮೋದಿ, ‘ಗುಜರಾತ್ ಮಾದರಿ’ ಎಂಬ ಭ್ರಮಾಲೋಕವನ್ನು ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ. ಗುಜರಾತ್‌ನ ಅಭಿವೃದ್ಧಿಯ ಕುರಿತು ಸುಳ್ಳು ಮಾಹಿತಿಗಳನ್ನು ನೀಡಿ, ಮತದಾರರನ್ನು ವಂಚಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
 
 ಶಿಕ್ಷಣ, ಆರೋಗ್ಯ, ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ಗುಜರಾತ್ ಹಿಂದುಳಿದಿದೆ. ಅಲ್ಲಿನ ಶೇಕಡ 60ರಷ್ಟು ಮಕ್ಕಳು ಅರ್ಧಕ್ಕೆ ಶಾಲೆ ಬಿಡುತ್ತಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ಬಜೆಟ್‌ನ ಶೇ 6ರಷ್ಟು ಮೊತ್ತವನ್ನು ಮೀಸಲಿಟ್ಟಿದೆ. ಆದರೆ, ಗುಜರಾತ್‌ನಲ್ಲಿ ಈ ಮೊತ್ತ ಶೇ 3 ಮಾತ್ರ. ತಲಾ ಆದಾಯದ ದೃಷ್ಟಿಯಿಂದ ಗುಜರಾತ್ ದೇಶದಲ್ಲಿ 12ನೇ ಸ್ಥಾನದಲ್ಲಿದೆ. ಇಷ್ಟೆಲ್ಲಾ ಅಂಕಿಅಂಶಗಳಿದ್ದರೂ ಗುಜರಾತ್ ರಾಜ್ಯ ತೀರಾ ಮುಂದುವರಿದಿದೆ ಎಂಬುದಾಗಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದರು.
 
 ನೈತಿಕತೆ ಇಲ್ಲ: ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನೂ ಮೋದಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರರನ್ನು ಪಕ್ಕದಲ್ಲೇ ಕೂರಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುವುದಕ್ಕೆ ಅರ್ಥವಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
 
 ಸಾಮಾಜಿಕ ನ್ಯಾಯದಲ್ಲೂ ಬಿಜೆಪಿಗೆ ನಂಬಿಕೆ ಇಲ್ಲ. ಹಿಂದುಳಿದ ವರ್ಗಗಳು, ದಲಿತರಿಗೆ ಆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯವೇ ದೊರೆಯುವುದಿಲ್ಲ. ಈಶ್ವರಪ್ಪ ಅವರಂತಹ ರಾಜಕಾರಣಿಗಳಿಗೆ ಇವೆಲ್ಲಾ ಅರ್ಥವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಹೊಂದಿದೆ ಎಂದರು.
 
 ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ನೀಡಿರುವ ಹೇಳಿಕೆ ಅರ್ಥಹೀನವಾದುದು. ದೇಶದ ಜನತೆ ಕೋಮುವಾದಿಗಳನ್ನು ಬೆಂಬಲಿಸುವುದಿಲ್ಲ. ಮೋದಿ ಈ ದೇಶದ ಪ್ರಧಾನಿ ಆಗುವುದಿಲ್ಲ. ರಾಜ್ಯದಲ್ಲೂ ಬಿಜೆಪಿಗೆ ಹೆಚ್ಚು ಸ್ಥಾನ ದೊರೆಯುವುದಿಲ್ಲ ಎಂದರು.
 
 ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಕೇಂದ್ರದ ಯುಪಿಎ ಸರ್ಕಾರದ ಸಾಧನೆಗಳು ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ರಾಜ್ಯದ ಜನರು ಬೆಂಬಲ ನೀಡುತ್ತಾರೆ. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳಲಿದೆ’ ಎಂದರು.
 
 ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಎಸ್.ಮಹದೇವಪ್ರಸಾದ್, ಎಐಸಿಸಿ ಕಾರ್ಯದರ್ಶಿ ಡಾ.ಚೆಲ್ಲಕುಮಾರ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಮಾಜಿ ಸಚಿವ ಪ್ರೊ.ಮುಮ್ತಾಜ್ ಅಲಿಖಾನ್, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕರ್ತರು ಬೀದಿಪಾಲು
 ‘ಕೆಜೆಪಿ ಕಟ್ಟುವಾಗ ಎಲ್ಲರಿಗೂ ಸಮಾನ ಗೌರವ ನೀಡುವ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದ್ದರು. ಆದರೆ, ಅವರು ಬಿಜೆಪಿಗೆ ಸೇರಿದ ಬಳಿಕ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ ಅವರಿಗೆ ಮಾತ್ರ ಸ್ಥಾನಮಾನ ಕೊಡಿಸಿದರು. ಪಕ್ಷ ಕಟ್ಟಲು ಶ್ರಮಿಸಿದ ಕಾರ್ಯಕರ್ತರನ್ನು ಬೀದಿಪಾಲು ಮಾಡಿದರು’ ಎಂದು ಕೆಜೆಪಿ ತೊರೆದು ಕಾಂಗ್ರೆಸ್ ಸೇರಿದ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಆರೋಪಿಸಿದರು.
‘ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸಲು ವಿಫಲರಾದರು. ನಮಗೆ ಹಿಂದಿನಿಂದಲೂ ಕಾಂಗ್ರೆಸ್ ಜೊತೆ ಸಂಬಂಧ ಇದೆ. ಆ ಕಾರಣಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇವೆ’ ಎಂದರು.
 ಮಾಜಿ ಶಾಸಕರಾದ ಉಮಾಪತಿ, ಎಚ್.ಡಿ.ಬಸವರಾಜು, ಎಚ್.ನಿಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಕೆಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.