ADVERTISEMENT

ಪ್ರವಾಸೋದ್ಯಮ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ವ್ಯಾಪಾರ ವಹಿವಾಟನ್ನು ವಿಸ್ತರಿಸುವ ಮುಖ್ಯ ಉದ್ದೇಶದಿಂದ ಹಮ್ಮಿಕೊಂಡಿರುವ ಮೂರು ದಿನಗಳ `ಪ್ರಯಾಣ ಹಾಗೂ ಪ್ರವಾಸೋದ್ಯಮ ಮೇಳ~ ನಗರದ ಅರಮನೆ ಮೈದಾನದ `ಗಾಯತ್ರಿ ವಿಹಾರ~ದಲ್ಲಿ ಶುಕ್ರವಾರ ಆರಂಭವಾಯಿತು.

ದೇಶದ ಅತಿ ದೊಡ್ಡ ಪ್ರವಾಸೋದ್ಯಮ ಮೇಳ ಎನ್ನುವ ಖ್ಯಾತಿ ಪಡೆದಿರುವ ಈ ಮೇಳಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಗೈರು ಹಾಜರಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ ಚಾಲನೆ ನೀಡಿದರು.

ಚೀನಾ, ಹಾಂಕಾಂಗ್, ಜಪಾನ್, ಟರ್ಕಿ, ನೇಪಾಳ ಸೇರಿದಂತೆ ಆರು ದೇಶಗಳು ಹಾಗೂ 22 ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಮಂಡಳಿಗಳು ಮತ್ತು ಆಯಾ ದೇಶ- ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರಗಳ ಸಹಭಾಗಿಗಳಾದ ಪ್ರವಾಸೋದ್ಯಮ ಏಜೆಂಟರು, ಹೋಟೆಲ್- ರೆಸಾರ್ಟ್‌ಗಳು ಮೇಳದಲ್ಲಿ 250 ಪ್ರದರ್ಶನ ಮಳಿಗೆಗಳನ್ನು ತೆರೆದಿವೆ.

ADVERTISEMENT

ಆಯಾ ದೇಶ- ರಾಜ್ಯಗಳಲ್ಲಿನ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು, ವನ್ಯಧಾಮ, ಜಲಪಾತಗಳು, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನಗಳೊಂದಿಗೆ ಪ್ರವಾಸಿಗರನ್ನು ಸೆಳೆಯುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಬೆಳಿಗ್ಗೆ 11ರಿಂದ ಸಂಜೆ 7 ಗಂಟೆವರೆಗೆ ಪ್ರವೇಶ ಉಚಿತ. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಪ್ಯಾಕೇಜ್ ಪ್ರವಾಸದ ಬಗ್ಗೆಯೂ ಟ್ರಾವೆಲ್ ಏಜೆಂಟರಿಂದ ಮಾಹಿತಿ ಪಡೆಯಬಹುದು.

ಮೇಳವನ್ನು ಉದ್ಘಾಟಿಸಿದ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ, ದೇಶದ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಕೂಡ ಒಂದು. ಬೃಹತ್ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿರುವ ಈ ಕ್ಷೇತ್ರದ ಉತ್ತೇಜನಕ್ಕೆ ಇಂತಹ ಮೇಳಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಹಿಮ ಹಾಗೂ ಮರುಭೂಮಿ ಹೊರತುಪಡಿಸಿದರೆ  ಇತರೆ ಪ್ರವಾಸಿ, ಧಾರ್ಮಿಕ ಕ್ಷೇತ್ರಗಳು, ಬಂದರು, ವನ್ಯಜೀವಿ ತಾಣಗಳು ಕರ್ನಾಟಕದಲ್ಲೂ ಇವೆ. ಇದರ ಪ್ರಯೋಜನವನ್ನು ಪಡೆಯಲು ಸಹಭಾಗಿ ಸಂಸ್ಥೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನ ಜನತೆ ಅದರಲ್ಲೂ ವಿಶೇಷವಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೊಳ್ಳುವ ಮೂಲಕ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದರ ಜತೆಗೆ, ಯಾವುದಾದರೂ ಸಂಶಯಗಳಿದ್ದಲ್ಲಿ ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಕೋರಿದರು.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ. ವಿಶ್ವನಾಥರೆಡ್ಡಿ, ಫೇರ್ ಫೆಸ್ಟ್ ಮೀಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಅಗರ‌್ವಾಲ್, ನೇಪಾಳ ಪ್ರವಾಸೋದ್ಯಮ ಮಂಡಳಿಯ ಗೌತಮ್ ಮಾತನಾಡಿದರು. 

ಉತ್ತರಖಂಡ, ಆಂಧ್ರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಅಸ್ಸಾಂ, ಗೋವಾ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ರಾಜಾಸ್ಥಾನ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ದಾದ್ರಾ ಮತ್ತು ನಗರ್ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್‌ನ ಪ್ರವಾಸೋದ್ಯಮ ಇಲಾಖೆಗಳು, ಮಂಡಳಿಗಳು ಹಾಗೂ ಅವುಗಳ ಸಹಭಾಗಿ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.