ADVERTISEMENT

ಪ್ರವಾಹ: ಇಬ್ಬರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನರಗುಂದ (ಗದಗ ಜಿಲ್ಲೆ): ತಾಲ್ಲೂಕಿನ ಬನಹಟ್ಟಿ ಬಳಿ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಸೋಮವಾರ ಯಾಂತ್ರಿಕ ದೋಣಿ ಮೂಲಕ ರಕ್ಷಿಸಲಾಯಿತು.

ಹುಬ್ಬಳ್ಳಿಯ ಅಗ್ನಿಶಾಮಕ ಸಿಬ್ಬಂದಿ ಐದು ತಾಸುಗಳ ಕಾರ್ಯಾಚರಣೆ ನಡೆಸಿ ವಸಂತ ಭರಮಗೌಡ್ರ, ಮಹಾಲಿಂಗಪ್ಪ ಕಲಹಾಳ ಅವರನ್ನು ಯಾಂತ್ರಿಕ ದೋಣಿ ಬಳಸಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ಘಟನೆ ವಿವರ: ಏತ ನೀರಾವರಿ ಕಟ್ಟಡದ ಭದ್ರತೆಗೆ ನಿಯೋಜಿಸಲಾಗಿದ್ದ ಇಬ್ಬರು ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿಕೊಂಡರು.
ಸೋಮವಾರ ಬೆಳಿಗ್ಗೆ ನೀರಿನ ಪ್ರಮಾಣ ಹೆಚ್ಚಾಗಿ ಸಿಬ್ಬಂದಿಗೆ ಗ್ರಾಮದ ಕಡೆ ಬರಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರು ಮೊಬೈಲ್ ಮೂಲಕ ಗ್ರಾಮದ ಜನರಿಗೆ ವಿಷಯ ತಿಳಿಸಿದರು. 

ದುರಗಪ್ಪ ಎಂಬುವರು ಈಜಿಕೊಂಡು ಹೋಗಿ ಮಧ್ಯಾಹ್ನ 12 ಗಂಟೆಗೆ ಜಾಕ್‌ವೆಲ್‌ನಲ್ಲಿ ಸಿಲುಕಿದ್ದ ಸಿಬ್ಬಂದಿಗೆ ಆಹಾರ ತಲುಪಿಸಿದರು.
ಡಿವೈಎಸ್‌ಪಿ ವಿ.ವಿ.ಕುಂಬಾರ ಹಾಗೂ ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಸಹ ಗ್ರಾಮಕ್ಕೆ ಬಂದು ಕಾರ್ಯಾಚರಣೆಗೆ ನೆರವಾದರು.

ಹುಬ್ಬಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಯಾಂತ್ರಿಕ ದೋಣಿ ಮೂಲಕ ಇಬ್ಬನ್ನೂ ಸುರಕ್ಷಿತವಾಗಿ ದಡಕ್ಕೆ ತರಲಾಯಿತು.
ಬೆಣ್ಣೆ ಹಳ್ಳದ ಪ್ರವಾಹದ ಪರಿಣಾಮ ಸುರಕೋಡ, ಕುರ್ಲಗೇರಿ ಹಾಗೂ ಬನಹಟ್ಟಿ ಗ್ರಾಮಗಳ ನೂರಾರು ಎಕರೆಯಲ್ಲಿನ ಬೆಳೆ ಹಾನಿಯಾಗಿದೆ. ಯಾವಗಲ್ ಬಳಿಯ ಬೆಣ್ಣೆ ಹಳ್ಳದ ಸೇತುವೆ ತುಂಬಿಹರಿದ ಪರಿಣಾಮ ನರಗುಂದ-ರೋಣ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಭಾರಿ ಮಳೆ-ಒಡೆದ ಕಾಲುವೆ
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿನ ನೀಲಮ್ಮನ ಕೆರೆಗೆ ಹರಿದು ಬರುವ ನೀರಿನ ಕಾಲುವೆ ಒಡೆದು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು ಬೆಳೆದು ನಿಂತ ಈರುಳ್ಳಿ, ಗೋವಿನಜೋಳ ಪೈರುಗಳು ಜಲಾವೃತವಾಗಿವೆ. ಕೆಲವೆಡೆ ವಿದ್ಯುತ್ ಕಂಬಗಳ ತಂತಿ ಹರಿದುಹೋಗಿ, ರಾತ್ರಿ 8ರ ವರೆಗೂ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿ, ತುರ್ತು ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಭಾನುವಾರ ರಾತ್ರಿ ದಿಢೀರ್ ಪ್ರವಾಹ ಬಂದು ರಾಮದುರ್ಗ ತಾಲ್ಲೂಕಿನ ಅವರಾದಿಯ ಬೀರಪ್ಪ ಹೆಕ್ಕೆಣ್ಣವರ ಅವರ  4 ಕುರಿಗಳು ಕೊಚ್ಚಿಕೊಂಡು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.