ADVERTISEMENT

ಪ್ರಸಂಗಕರ್ತ ಅನಂತರಾಮ ಬಂಗಾಡಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:15 IST
Last Updated 12 ಮೇ 2019, 20:15 IST
ಅನಂತರಾಮ ಬಂಗಾಡಿ
ಅನಂತರಾಮ ಬಂಗಾಡಿ   

ಮಂಗಳೂರು: ಯಕ್ಷಗಾನ ಪ್ರಸಂಗ ಕರ್ತರಾಗಿ, ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ನಿವಾಸಿ ಅನಂತರಾಮ ಬಂಗಾಡಿ (68) ಅವರು ಭಾನುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ, ಮಗ, ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ.

150ಕ್ಕೂ ಹೆಚ್ಚು ಯಕ್ಷಗಾನಪ್ರಸಂಗಗಳನ್ನು ಬರೆದಿದ್ದ ಅನಂತರಾಮ ಬಂಗಾಡಿ, ಯಕ್ಷಗಾನ ಛಂದಸ್ಸಿನ ಅಧ್ಯಯನ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ನಡೆಸಿದ್ದರು. ಅವರು ಬರೆದ ‘ಕಾಡ ಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಬೊಳ್ಳಿ ಗಿಂಡೆ’, ‘ಪಟ್ಟದ ಪದ್ಮಲೆ’ ಮುಂತಾದ ಪ್ರಸಂಗಗಳು ಪ್ರದರ್ಶನ ಕಂಡಿವೆ. ಕ್ರೈಸ್ತ ಸಂತರ ಕತೆಗಳನ್ನೂ ಯಕ್ಷಗಾನಕ್ಕೆ ಅಳವಡಿಸಿದ್ದರು. ಅವರ ನೇತೃತ್ವದಲ್ಲಿ ರೂಪು
ಗೊಂಡ ‘ಸೌಹಾರ್ದ ಕಲಾವಿದರು, ಯಕ್ಷರಂಗ ಬಂಗಾಡಿ’ ತಂಡ 15 ವರ್ಷಗಳ ಕಾಲ ವಿವಿಧೆಡೆ ಪ್ರದರ್ಶನ ನೀಡಿದೆ. ಜ್ಯೋತಿರ್ವಿಜ್ಞಾನ ಕ್ಷೇತ್ರದಲ್ಲಿಯೂ ಜ್ಞಾನ ಹೊಂದಿದ್ದ ಅವರು ಮೊತ್ತ ಮೊದಲ ‘ತುಳು ಜ್ಯೋತಿಷ ಗ್ರಂಥ’ ಬರೆದಿದ್ದರು. ತುಳು ನಿಘಂಟು ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT