ADVERTISEMENT

ಪ್ರೊಟೀನ್‌ಯುಕ್ತ ‘ಪೌಷ್ಟಿಕ್‌–9’ ಶೀಘ್ರ ಮಾರುಕಟ್ಟೆಗೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನೆ

ಯತೀಶ್ ಕುಮಾರ್ ಜಿ.ಡಿ
Published 20 ನವೆಂಬರ್ 2013, 19:30 IST
Last Updated 20 ನವೆಂಬರ್ 2013, 19:30 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರಾಯೋಗಿಕ ತಾಟಿನಲ್ಲಿರುವ ಹೊಸ ಭತ್ತದ ತಳಿ ಪೌಷ್ಟಿಕ್‌–9
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರಾಯೋಗಿಕ ತಾಟಿನಲ್ಲಿರುವ ಹೊಸ ಭತ್ತದ ತಳಿ ಪೌಷ್ಟಿಕ್‌–9   

ಬೆಂಗಳೂರು: ಇಂದು ಎಲ್ಲರ ಕಾಳಜಿ ಆರೋಗ್ಯದತ್ತ ಹರಿಯುತ್ತಿದೆ. ಪ್ರೊಟೀನ್‌ಯುಕ್ತ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಕರೆಗೆ ಓಗೊಟ್ಟಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರೊಟೀನ್‌ ಅಂಶ ಹೆಚ್ಚಿರುವ ಭತ್ತವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಸಾಮಾನ್ಯ ಅಕ್ಕಿಯಲ್ಲಿ ಶೇ ೬ರಿಂದ ೭ರಷ್ಟು ಮಾತ್ರವೇ ಪ್ರೊಟೀನ್‌ ಅಂಶವಿರುತ್ತದೆ. ಉಳಿ­ದಂತೆ ಶರ್ಕರಪಿಷ್ಟ

(ಕಾರ್ಬೋಹೈಡ್ರೇಟ್‌) ಹೆಚ್ಚಾ­ಗಿರುತ್ತದೆ. ಅಕ್ಕಿಯನ್ನು ಪಾಲಿಶ್‌ ಮಾಡು­ವಾಗಲೂ ಶೇ ೧ರಿಂದ ೨ರಷ್ಟು ಪ್ರೊಟೀನ್‌ ನಷ್ಟವಾಗುತ್ತದೆ. ಹೀಗಾಗಿ ಬಿಳಿ ಬಣ್ಣದ ಅಕ್ಕಿಯಲ್ಲಿ ಪ್ರೊಟೀನ್‌ ಅಂಶ ತೀರಾ ಕಡಿಮೆ.

ಹೀಗಾಗಿಯೇ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವವರು ಪ್ರೊಟೀನ್‌ ಅಂಶ ಹೆಚ್ಚಾಗಿ­ರುವ ರಾಗಿ, ಗೋಧಿ ಹಾಗೂ ತೃಣಧಾನ್ಯ ಬಳಸುತ್ತಿದ್ದಾರೆ. ಅಕ್ಕಿಯಲ್ಲಿ ಶರ್ಕರಪಿಷ್ಟ  ಹೆಚ್ಚಾಗಿದೆ, ಇದು ಆರೋಗ್ಯಕ್ಕೆ ಒಳ್ಳೆಯದೇನಲ್ಲ ಎನ್ನುವುದು ಗೊತ್ತಿದ್ದರೂ ನಗರಗಳಲ್ಲಿ ಅನ್ನ ತಿನ್ನುವ ಕುಟುಂಬಗಳೇ ಹೆಚ್ಚಾಗುತ್ತಿವೆ. ಇದೇ ಕಾರಣದಿಂದ ಅಕ್ಕಿಯಲ್ಲಿರುವ ಪ್ರೊಟೀನ್‌ ಅಂಶವನ್ನು ಹೆಚ್ಚಿಸುವ ಸಾಹಸಕ್ಕೆ ಕೃಷಿ ವಿ.ವಿ ಕೈಹಾಕಿದ್ದು, ಅದರಲ್ಲಿ ಸಫಲವೂ ಆಗಿದೆ.

ಸಂಶೋಧನೆಗಳು ಒಂದೇ ವರ್ಷದಲ್ಲಿ ಫಲ ನೀಡುವುದಿಲ್ಲ. ವಿ.ವಿಯ ಅನುವಂಶಿಯತೆ ಮತ್ತು ಸಸ್ಯತಳಿ ವಿಜ್ಞಾನ ವಿಭಾಗದ ಡಾ.ಶೈಲಜಾ ಹಿತ್ತಲಮನಿ ಅವರು ಈ ಸಂಶೋಧನೆ ಆರಂಭಿಸಿ ಒಂಬತ್ತು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಅದೆಷ್ಟೋ ಭತ್ತದ ಸಂಕರಣ ನಡೆಸಿದ್ದಾರೆ. ಅದರಲ್ಲಿ ಅವರಿಗೆ ತೃಪ್ತಿ ತಂದ ಭತ್ತಕ್ಕೆ ಪೌಷ್ಟಿಕ್‌–೯ ಎನ್ನುವ ಹೆಸರನ್ನು ನೀಡಿದ್ದಾರೆ. ಶೇ ೧೩ರಿಂದ ೧೪ರಷ್ಟು ಪ್ರೊಟೀನ್‌ ಇರುವ ಈ ಭತ್ತವು ೨೦1೪ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.

ದಶಕಗಳಷ್ಟು ಹಳೆಯದಾದ ಪಿಬಿಟಿ ತಳಿ (ಸೂಪರ್‌ಫೈನ್‌ ರೈಸ್‌) ಹಾಗೂ ಎಚ್‌ಪಿ- ೧೪ (ಉದ್ದಕ್ಕಿ)ಯ ಸಂಕರಣ ತಳಿಯೇ ಪೌಷ್ಟಿಕ್‌. ತಳಿಗುಣಗಳನ್ನು ಬೆಸೆದಾಗ ಬಂದ ಮೊದಲ ಪೀಳಿಗೆಯ ಸುಮಾರು ೬೫೦೦ ಗಿಡಗಳು ಗದ್ದೆಯಲ್ಲಿವೆ. ಒಂದು ಭತ್ತದಲ್ಲಿ ಪ್ರೊಟೀನ್‌ ಅಂಶ ಪೌಷ್ಟಿಕ್‌–೯ಕ್ಕಿಂತ ಹೆಚ್ಚಾಗಿದೆ. ಇದಕ್ಕೆ ಪೌಷ್ಟಿಕ್‌–೧ ಎಂದು ಹೆಸರಿಸಲಾಗಿದೆ. ಅದರಲ್ಲಿ ಶೇ ೧೭ರಷ್ಟು ಪ್ರೊಟೀನ್‌ ಇದೆ. ಈ ಅಂಶ ಹೆಚ್ಚಾಗಿರುವ ಕಾರಣಕ್ಕೆ ಇದು ತಿನ್ನಲು ರುಚಿಯಾಗಿಲ್ಲ. ಇದೇ ಕಾರಣಕ್ಕೆ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇದನ್ನು ಬೇಕಾದರೆ ಹಾಲಿನ ಜೊತೆ ಮಿಶ್ರ ಮಾಡಿ ಕುಡಿಯುವ ಪುಡಿ ತಯಾರಿಸಲು ಬಳಸಬಹುದು ಎನ್ನುತ್ತಾರೆ ಡಾ.ಶೈಲಜಾ.

ಪೌಷ್ಟಿಕ್‌ ತಳಿಯಲ್ಲಿ ಪ್ರೊಟೀನ್‌ ಹೆಚ್ಚಾಗಿರುವ ಅಂಶ ಪಿಬಿಟಿ ತಳಿಯಿಂದ ಬಂದಿದೆ. ಪ್ರೊಟೀನ್‌ ಅಂಶ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ನಡೆದ ಸಂಶೋಧನೆಯಿಂದಾಗಿ ಇಳುವರಿ ಬಗ್ಗೆ ಕೃಷಿ ವಿ.ವಿ ವಿಜ್ಞಾನಿಗಳು ಹೆಚ್ಚು ಒತ್ತು ನೀಡಿಲ್ಲ. ಹೀಗಾಗಿ ಇಳುವರಿ ಪ್ರತಿ ಹೆಕ್ಟೇರ್‌ಗೆ ೨೦ ಕ್ವಿಂಟಲ್‌ ಬರಬಹುದು ಎಂದು ಅಂದಾಜಿಸಲಾಗಿದೆ. ೧೩೦ ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯನ್ನು ಸಾಮಾನ್ಯ ಪದ್ಧತಿಯಲ್ಲಿ, ನೀರು ಕಡಿಮೆ ಬಯ­ಸುವ ‘ಶ್ರೀ’ ಪದ್ಧತಿಯಲ್ಲಿ ಬೆಳೆಯಬಹುದು.

ಸಾಮಾನ್ಯ ಅಕ್ಕಿಗಿಂತ ಶೇ ೮೦ರಷ್ಟು ಪ್ರೊಟೀನ್‌ ಅಂಶ ಹೆಚ್ಚಾಗಿರುವ ಪೌಷ್ಟಿಕ್ -–೯ಅನ್ನು ೨೦೧೪ರಲ್ಲಿ ರಾಜ್ಯದಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೃಷಿ ವಿ.ವಿ ಹಾಗೂ ಕೃಷಿ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದೆ. ಕೃಷಿ ವಿ.ವಿಯು ತನ್ನ ವ್ಯಾಪ್ತಿಯಲ್ಲಿರುವ ಮಂಡ್ಯದ ವಿ.ಸಿ.ಫಾರಂ, ನವಿಲೆ, ಹಾಸನ ಹಾಗೂ ಕತ್ತಲಗೆರೆಯ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಪರೀಕ್ಷೆಗೆ ಒಡ್ಡಿದೆ.

ಇದೇ ರೀತಿಯಲ್ಲಿ ಕೃಷಿ ಇಲಾಖೆಯು ಚಿಂತಾಮಣಿ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಸೇರಿ­ದಂತೆ ರಾಜ್ಯದಲ್ಲಿ ಒಣಹವೆಯಿರುವ ಸ್ಥಳಗಳಲ್ಲಿ ಪರೀಕ್ಷಿಸುತ್ತಿದೆ. ಈ ಭತ್ತವನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಬೆಳೆಯಲು ಶಿಫಾರಸು ಮಾಡಿ­ದ್ದರೂ, ಬಿಸಿಲು ಹೆಚ್ಚಾಗಿರುವ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ.

  ಈ ಭತ್ತದಲ್ಲಿ ಹೃದಯದ ಆರೋಗ್ಯಕ್ಕೆ ಸಹಕಾರಿ ಎಂದು ಹೇಳುವ ಅಮೈನೋ ಆಮ್ಲ ಸಾಮಾನ್ಯ ಅಕ್ಕಿಗಿಂತ ಶೇ ೧೫ರಷ್ಟು ಹೆಚ್ಚಾಗಿದೆ. ಸಂಶೋಧನೆಯಲ್ಲಿ ಕೃಷಿ ವಿ.ವಿಯ ಮಣ್ಣು ವಿಜ್ಞಾನ ವಿಭಾಗ, ಕೃಷಿ ವಿಸ್ತರಣೆ, ಕೀಟ ವಿಜ್ಞಾನ, ಕೃಷಿ ಹವಾಮಾನ ವಿಭಾಗವೂ ಕೈಜೋಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.