ADVERTISEMENT

ಫೇಸ್‌ಬುಕ್‌ನಲ್ಲಿರುವ ಬಶೀರ್ ಅಡ್ಯಾರ್ ಯಾರು?

ನೆಟ್‌ ಪ್ರಪಂಚದಲ್ಲಿ ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 12:06 IST
Last Updated 17 ಜೂನ್ 2018, 12:06 IST
ಬಶೀರ್ ಅಡ್ಯಾರ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಗೊಂಡಿರುವ ಚಿತ್ರ
ಬಶೀರ್ ಅಡ್ಯಾರ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಗೊಂಡಿರುವ ಚಿತ್ರ   

ಮಂಗಳೂರು: ಹಿಂದೂ ದೇವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಚಿತ್ರದ ಜತೆಗೆ ನಿಂದನಾತ್ಮಕ ಸಂದೇಶ ಪ್ರಕಟಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬಶೀರ್ ಅಡ್ಯಾರ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶನಿವಾರ ರಾತ್ರಿ ಅವಹೇಳನಕಾರಿ ಸಂದೇಶ ಪ್ರಕಟಗೊಂಡಿದೆ. ಅಮರ್ ಅಕ್ಬರ್ ಅಂಥೋನಿ ಮತ್ತು ಇತರ 12 ಖಾತೆಗಳನ್ನು ಸಂದೇಶಕ್ಕೆ ಟ್ಯಾಗ್ ಮಾಡಲಾಗಿದೆ. ಲಕ್ಷ್ಮೀ ದೇವಿ ಚಿತ್ರದ ಜತೆ ರೂಪದರ್ಶಿಯೊಬ್ಬಳ ಚಿತ್ರ ಸೇರಿಸಿ ಅಶ್ಲೀಲವಾಗಿ ಬಿಂಬಿಸಲಾಗಿದೆ. ಮತ್ತೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಲಕ್ಷ್ಮೀ ದೇವಿ ಚಿತ್ರದ ಜತೆ ಸೇರಿಸಿ ಪ್ರಕಟಿಸಲಾಗಿದ್ದು, ಆಶ್ಲೀಲ ಕವನವೊಂದನ್ನೂ ಬರೆಯಲಾಗಿದೆ. ಛತ್ರಪತಿ ಶಿವಾಜಿ ತಲೆಯನ್ನು ಗೊರಿಲ್ಲಾದ ದೇಹಕ್ಕೆ ಅಂಟಿಸಿ ಚಿತ್ರಿಸಲಾಗಿದೆ.

ಬಶೀರ್ ಅಡ್ಯಾರ್‌ ಹೆಸರಿನ ಫೇಸ್‌ಬುಕ್‌ ಖಾತೆ ನಕಲಿ ಎಂದೂ ಹೇಳಲಾಗುತ್ತಿದೆ.

ADVERTISEMENT

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಆಕ್ರೋಶ: ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಐಟಿ ಸೆಲ್‌ನವರೇ ನಕಲಿ ಖಾತೆ ತೆರೆದು ಇಂತಹ ಸಂದೇಶ ಪ್ರಕಟಿಸುತ್ತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಹಲವರು ಆರೋಪಿಸಿದ್ದಾರೆ.

‘ಹಿಂದು-ಮುಸ್ಲಿಮರ ನಡುವೆ ಕೊಳ್ಳಿ ಇಟ್ಟು ಕೋಮುಗಲಭೆ ನಡೆಸಲು ಪ್ರಯತ್ನಿಸುವುದೇ ಬಿಜೆಪಿಯ ಐಟಿ ವಿಭಾಗ ಮತ್ತು ‘ಭಕ್ತ’ರ ಕೆಲಸ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅವರ ಹೊಲಸು ಕೃತ್ಯಕ್ಕೆ ನೀರೆರೆಯದಿರಿ’ ಎಂದು ಜಾಫರ್ ಷರೀಫ್ ಎಂಬುವವರು ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.


‘ಇದಕ್ಕೆ ಮುಖ್ಯ ಕಾರಣ ಸಂಘ ಪರಿವಾರದವರು. ಹಿಂದೂ–ಮುಸ್ಲಿಮರ ನಡುವೆ ವಿಷದ ಬೀಜ ಬಿತ್ತಿ ಅದರಲ್ಲಿ ರಾಜಕೀಯ ಲಾಭ ಗಳಿಸುವುದೇ ಇದರ ಮುಖ್ಯ ಉದ್ದೇಶ’ ಎಂದು ಅಕ್ಷತಾ ಎಂ.ಎಚ್‌. ಎಂಬುವವರು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಹಿಂದುತ್ವವಾದಿ ಗಣೇಶ್ ಎಂಬುವವರು ಬಶೀರ್ ಅಡ್ಯಾರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಂದೇಶ ಪ್ರಕಟಿಸಿದ್ದಾರೆ’ ಎಂದು ಅಂಕಿತ ನಂಬಿಯಾರ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದಾರೆ.

ಪ್ರಕರಣ ದಾಖಲು: ಪ್ರಕರಣಕ್ಕೆ ಸಂಬಂಧಿಸಿ ಗಣೇಶ್‌ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಹನುಮಂತರಾಯಪ್ಪ ತಿಳಿಸಿದ್ದಾರೆ. ಅಲ್ಲದೆ  ಫೇಸ್‌ಬುಕ್‌ ಅಥವಾ ವಾಟ್ಸ್‌ಆಪ್‌ ಮೂಲಕ ಈ ಆಕ್ಷೇಪಾರ್ಹ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಜನರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

‘ಲಕ್ಷ್ಮೀದೇವಿ ಮತ್ತು ಶಿವಾಜಿ ಚಿತ್ರವನ್ನು ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡಿದ್ದಲ್ಲದೆ ಅಶ್ಲೀಲವಾದ ಹಾಡನ್ನು ಬಳಸಲಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ  ಈ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಹಿಂದು ಪರಿಷತ್‌ ಮುಖಂಡ ಜಗದೀಶ್‌ ಶೇಣವ ಮತ್ತು ಶರಣ್‌ಪಂಪ್‌ವೆಲ್‌ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.