ADVERTISEMENT

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿ ರವಿ ಬೆಳಗೆರೆಗೆ ಬೆಂಬಲ ವ್ಯಕ್ತಪಡಿಸಿದ ಪತ್ನಿ ಯಶೋಮತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 17:25 IST
Last Updated 11 ಡಿಸೆಂಬರ್ 2017, 17:25 IST
ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿ ರವಿ ಬೆಳಗೆರೆಗೆ ಬೆಂಬಲ ವ್ಯಕ್ತಪಡಿಸಿದ ಪತ್ನಿ ಯಶೋಮತಿ
ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿ ರವಿ ಬೆಳಗೆರೆಗೆ ಬೆಂಬಲ ವ್ಯಕ್ತಪಡಿಸಿದ ಪತ್ನಿ ಯಶೋಮತಿ   

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಹಾಯ್‌ ಬೆಂಗಳೂರು’ ಪತ್ರಿಕೆ ಸಂಸ್ಥಾಪಕ ರವಿ ಬೆಳಗೆರೆ ಬಂಧನವಾದ ಬಳಿಕ, ಪ್ರಕರಣ ಕುರಿತು ಹಾಗೂ ಪತಿ ರವಿ ಬೆಳಗೆರೆಗೆ ಬೆಂಬಲ ಸೂಚಿಸಿ ಅವರ ಎರಡನೇ ಪತ್ನಿ ಯಶೋಮತಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸೋಮವಾರ ಪೋಸ್ಟೊಂದನ್ನು ಪ್ರಕಟಿಸಿದ್ದಾರೆ.

ಅದರಲ್ಲಿ ಹೀಗೆ ಬರೆದಿದ್ದಾರೆ: ‘ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆಯೇ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿ.ವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಅದು ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ....’.

‘ಏನೂ ಯೋಚನೆ ಮಾಡಬೇಡ, ನಂಗೇನೂ ಆಗಲ್ಲ’ ಅಂತಾ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಾಗೂ ಹಿಮ್. ನಿಮಗೇನೂ ಆಗಲ್ಲ ರ್ರೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ’.

ADVERTISEMENT

‘ಮೊನ್ನೆ ತಾನೇ ನಡೆದ ಹಿಮ್‌ನ ಬರ್ತ್‌ ಡೇ ಪೋಟೊಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಸೆಲೆಕ್ಟ್‌ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ....‘ಯಶೂ ಮಾ ಎಲ್ಲಿದ್ದೀರಾ? ಸ್ವಲ್ಪ ಟಿ.ವಿ ನೋಡಿ’ ಅಂದ ಕೂಡಲೇ ಟಿವಿ ಆನ್ ಮಾಡಿದರೆ, ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು.  ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ. ಹಿಮ್‌ ಬೇರೆ ಸ್ಕೂಲಿನಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ರಾತ್ರಿಯೆಲ್ಲ ಒಂದೇ ಸಮನೆ ಟಿ.ವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಎಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗ, ಜೊತೆಗೆ ಗೆಳತಿಯರ ಧೈರ್ಯದ ಮೆಸೇಜ್‌ಗಳು ಜೊತೆಯಾದವು. ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಫೇಸ್‌ ಮಾಡು ಅಂದ ಹಿಮ್‌’.

ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳಿಸಿ ಸಿಸಿಬಿ ಪೊಲೀಸರು ರವಿ ಬೆಳಗೆರೆ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ ಡಿ.23ರ ವರೆಗೂ ಬೆಳಗೆರೆ ಅವರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.

ಡಿ.24ರ ವರೆಗೂ ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿ ಪೊಲೀಸರು ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.